ಶರಣು ಸಿದ್ಧಿ ವಿನಾಯಕ - Sharanu siddhi Vinayaka

ಶರಣು ಸಿದ್ಧಿ ವಿನಾಯಕ
ಶರಣು ವಿದ್ಯಾ ಪ್ರದಾಯಕ

ಶರಣು ಪಾರ್ವತಿತನಯ ಮೂರುತಿ
ಶರಣು ಮೂಷಕವಾಹನ

ನಿಟಿಲನೇತ್ರನ ದೇವಿ ಸುತನೆ
ನಾಗಭೂಷಣ ಪ್ರೀಯನೆ
ಕಟಿಕಟಾಂಗದ ಕೋಮಲಾಂಗನೆ
ಕರ್ಣಕುಂಡಲಧಾರನೆ

ಬಟುವ ಮುತ್ತಿನಹಾರ ಪದಕನೆ
ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯ ಹೇಮಕಂಕಣ
ಪಾಶದಂಕುಶಧಾರನೆ

ಕುಕ್ಷಿ ಮಹಾಲಂಬೋದರನೆ
ಇಕ್ಷುಜಾಪನ ಗೆಲಿದನೆ
ಪಕ್ಷಿವಾಹನನಾದ ಪುರಂದರವಿಠಲನ ನಿಜದಾಸನೆ 

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

4. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ


ಶರಣು ಶರಣು ನಿನಗೆಂಬೆನೊ - sharanu sharanu ninagembeno

ಶರಣು ಶರಣು ನಿನಗೆಂಬೆನೊ ವಿಠಲ
ಕರುಣಾನಿಧಿಯೆಂಬೆ ಕಾಯಯ್ಯ ವಿಠಲ


ಶಿಶುವಾಗಿ ಜನಿಸಿದ್ಯೊ ಶ್ರೀರಾಮವಿಠಲ
ಶಶಿಧರನುತ ಗೋಪಿಕಂದನೆ ವಿಠಲ
ಅಸುರೆ ಪೂತನಿ ಕೊಂದ ಶ್ರೀಕೃಷ್ಣವಿಠಲ
ಕಸುಮನಾಭ ಸಿರಿವರ ಮುದ್ದುವಿಠಲ


ಅರಸಿ ರುಕ್ಮಿಣಿಗೆ ನೀ ಅರಸನೊ ವಿಠಲ
ಸರಸಿಜ ಸಂಭವ ಸನ್ನುತ ವಿಠಲ
ನಿರುತ ಇಟ್ಟಿಗೆ ಮೇಲೆ ನಿಂತ್ಯೊ ನೀ ವಿಠಲ
ಚರಣ ಸೇವೆಯನಿತ್ತು ಕಾಯಯ್ಯ ವಿಠಲ


ಕಂಡೆ ಗೋಪುರ ವೆಂಕಟ ಪ್ರಭು ವಿಠಲ
ಅಂಡಜವಾಹನ ಹೌದೊ ನೀ ವಿಠಲ
ಪಾಂಡುನಂದನ ಪರಿಪಾಲನೆ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲ

ವ್ಯರ್ಥವಲ್ಲವೆ ಜನ್ಮ - Vyarthavallave janma

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ
ಆರ್ಥಿಯಿಂದ ಹರಿಯ ನಾಮ
ನಿತ್ಯ ಸ್ಮರಿಸದವನ ಜನ್ಮ

ಹರಿಯ ಸೇವೆ ಮಾಡದವನ
ಹರಿಯ ಗುಣಗಳೆಣಿಸದವನ
ಹರಿಯ ಕೊಂಡಾಡದವನ
ಹರಿಯ ತಿಳಿಯದವನ ಜನ್ಮ

ದಾಸರೊಡನಾಡದವನ
ದಾಸರೊಡನೆ ಪಾಡದವನ
ದಾಸರ ಕೊಂಡಾಡದೆ ಹರಿ
ದಾಸನಾಗದವನ ಜನ್ಮ

ಒಂದು ಶಂಖ ಉದಕ ತಂದು
ಚಂದದಿಂದ ಹರಿಗೆ ಅರ್ಪಿಸಿ
ತಂದೆ ಪುರಂದರವಿಟ್ಠಲನ್ನ
ಹೊಂದಿ ನೆನೆಯದವನ ಜನ್ಮ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ವ್ಯಾಸರಾಯರ ಚರಣಕಮಲ - Vyaasaraayara charanakamala


ವ್ಯಾಸರಾಯರ ಚರಣಕಮಲ ದರುಶನವೆನಗೆ
ಯೇಸು ಜನ್ಮದ ಸುಕೃತ ಫಲದಿ ದೊರಕಿತೊ ಎನ್ನ
ಸಾಸಿರ ಕುಲಕೋಟಿಪಾವನ್ನವಾಯಿತು
ಶ್ರೀಶನ ಭಜಿಸುವದಧಿಕಾರಿ ನಾನಾದೆ
ದೋಷ ವಿರಹಿತನಾದ ಪುರಂದರವಿಠಲನ್ನ
ದಾಸರ ಕರುಣವು ಯೆನಮ್ಯಾಲೆ ಇರಲಾಗಿ

ಗುರುವುಪದೇಶವಿಲ್ಲದಾ ಮಂತ್ರ
ಗುರುವುಪದೇಶವಿಲ್ಲದಾ ಭಕ್ತಿ
ಗುರುವುಪದೇಶವಿಲ್ಲದಾ ಕ್ರಿಯೆಗಳು
ಉರಗನ ಉಪವಾಸದಂತೆ ಕಾಣಿರೋ
ಗುರುವ್ಯಾಸರಾಯರ ವರವೆಂದೆನಿಸಿ
ವರಮಹಾಮಂತ್ರವುಪದೇಶವಾಗಿ
ಪುರಂದರವಿಠಲ ಪರನೆಂದೆನಿಸಿ
ದುರಿತ ಭಯಗಳೆಲ್ಲ ಪರಿಹರಿಸಿದನಾಗಿ

ಅಂಕಿತವಿಲ್ಲದ ದೇಹ ನಿಷಿದ್ಧ
ಅಂಕಿತವಿಲ್ಲದ ಕಾಯ ಶೋಭಿಸದು
ಅಂಕಿತವಿಲ್ಲದೆ ಇರಬಾರದೆಂದು ಎನಗೆ ಚ-
ಕ್ರಾಂಕಿತವನು ಮಾಡಿಯೆನಗೆ
ಪಂಕಜನಾಭ ಪುರಂದರವಿಠಲನ್ನ
ಅಂಕಿತವೆನಗಿತ್ತ ಗುರುವ್ಯಾಸ ಮುನಿರಾಯ

ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ ಮೊದಲಾದ
ನ್ಯಾಯಗ್ರಂಥಗಳ ರಚಿಸಿ ತನ್ನಯ ಭಕ್ತರಿಗಿತ್ತೆ
ಮಾಯಾವಾದಿ ಮೊದಲಾದ ಇಪ್ಪತ್ತೊಂದು ಕುಭಾಷ್ಯದವರಾ
ಬಾಯ ಮುಚ್ಚಿಸಿದೆ ಮಧ್ವರಾಯರ ಕರುಣದಿಂದ ಸಿ-
ರಿಯರಸ ಪುರಂದರವಿಠಲನ್ನ ಭಕ್ತರೊಳು
ನಾಯಕನೆನಿಸಿಕೊಂಡೆ ರಾಯ ಗುರುವ್ಯಾಸಮುನಿಯೆ

ಶೇಷಾವೇಷ ಪ್ರಹ್ಲಾದನವತಾರನೆನಿಸಿದೆ
ವ್ಯಾಸರಾಯರೆಂಬೊ ಪೆಸರು ನೀನಾಂತೆ
ದೇಶಾಧಿಪಗೆ ಬಂದ ಕುಹುಯೋಗವನು ನೂಕಿ ನೀ ಸಿಂ-
ಹಾಸನವೇರಿ ಮೆರೆದೆ ಜಗವರಿಯೆ
ವ್ಯಾಸಾಬ್ಧಿಯನೆ ಕಟ್ಟಿಸಿ ದೇಶದಾವೊಳಗೆಲ್ಲ
ಭೂಸುರ ಕೀರ್ತಿಯನು ಪಡೆದೆ ಗುರುರಾಯಾ
ವಾಸುದೇವ ಪುರಂದರ ವಿಠಲನ್ನ ದಾಸರೊಳು ಹೆಗ್ಗಳಯೆನಿಸಿಕೊಂಡೆ

ಶ್ರೀನಾರಾಯಣ ಯೋಗಿಯಾದ ಶ್ರೀಪಾದರಾಯರೊಳು
ವಿಹಿತವಾದ ವಿದ್ಯಾಭ್ಯಾಸವ ಮಾಡಿದೆ
ನೀನು ಧರೆಯೊಳು ವಿಜಯೀಂದ್ರವಾದಿರಾಜರೆಂಬೊ
ಪರಮಶಿಷ್ಯರ ಪಡೆದು ಮೆರೆದೆ ಕೀರ್ತಿಯ
ಯೆಲ್ಲ ಸುರೇಂದ್ರ ಪುತ್ರಭಿಕ್ಷವ ಬೇಡಿ ವಿಜಯೀಂದ್ರನ
ಕರುಣಿಸಿದವನನುದ್ಧರಿಸಿದ ಕಾರಣ
ಗುರುವ್ಯಾಸರಾಯರು ಪರಮಗುರುಗಳು
ಪುರಂದರವಿಠಲನೆ ಪರದೈವ ಕಾಣಿರೊ

ಮಾನಸಪೂಜೆಯ ಮಾಡಿ
ದಾನವಾಂತಕ ರಂಗನ್ನ ಮೆಚ್ಚಿ
ತಾನೆ ಬಂದು ಗೋಪಾಲಕೃಷ್ಣನ
ಯೇನೆಂದು ಧ್ಯಾನಿಪೆನೊ
ಯೇನೆಂದು ಪೇಳುವೆ ನಿಮ್ಮ ಮಹಿಮೆಯ
ಜ್ಞಾನಿಗಳರಸ ವ್ಯಾಸಮುನಿರಾಯಾ
ಹೀನ ಜನರು ನಿನ್ನ ಮಾನವನೆಂದು
ನಾನಾ ನರಕಕೆ ಉರುಳುವರು
ಶ್ರೀನಿವಾಸ ಪುರಂದರವಿಠಲನು
ಆನಂದದಿಂದಲಿ ನಿನ್ನ ಮುಂದೆ
ಗಾನವ ಮಾಡುತ್ತ ಆಡುತ್ತಲಿಪ್ಪನು
ಯೇನು ಮಹಿಮೆಯೋದಾವ ಬಲ್ಲನೊ

ಈಸು ಮುನಿಗಳಿದ್ದೇನು ಮಾಡಿದರು ನಮ್ಮ
ವ್ಯಾಸಮುನಿ ಮಧ್ವಮತವನುದ್ಧರಿಸಿ
ಕಾಶಿ ಗದಾಧರಮಿಶ್ರನ ಸೋಲಿಸಿ
ದಾಸನ ಮಾಡಿಕೊಂಡ ಧಾರುಣಿಯೊಳಗೆ
ಕಾಶಿಮಿಶ್ರಪಕ್ಷಧರ ವಾಸುದೇವಾ
ವಾಲಿಲೇಯ ನಾರಸಿಂದ ಯೋಗಿ ಲಿಂಗಣ
ಮಿಶ್ರನೇ ಮೊದಲಾದ ವಿದ್ವಾಂಸರು
ನೂರೆಂಟು ಜಯ ಜಯ ಪತ್ರಿಕೆಯನ್ನು
ವಾಸುದೇವ ಗೋಪಾಲಕೃಷ್ಣನಿಗೆ
ಭೂಷಣವ ಮಾಡಿ ಹಾರಿಸಿದೆ
ಶ್ರೀಶಾ ಪುರಂದರವಿಟ್ಠಲನೆ
ಈಶಯೆಂದಾ ಬ್ರಹ್ಮಾದಿಗಳಿಗೆ
ಈಶನೆಂದು ಡಂಗುರ ಯೊಯ್ಸಿ ಮೆರೆದೆ ಜಗದೊಳಗೆ

ಗುರುವ್ಯಾಸರಾಯರ ಕರುಣ ಕಟಾಕ್ಷದಿ
ಪುರಂದರ ವಿಟ್ಠಲನ್ನ ಚರಣವ ಕಂಡೆ ನಾ


ವೇಣುನಾದ ಬಾರೋ - Venunaada baaro

ವೇಣುನಾದ ಬಾರೋ ಶ್ರೀ ವೆಂಕಟರಮಣನೆ ಬಾರೊ
ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ

ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ
ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ

ಬಿಲ್ಲ ಮುರಿದು ಮಲ್ಲರ ಗೆದ್ದ ಪುಲ್ಲನಾಭನೆ ಬಾರೋ
ಗೊಲ್ಲತೇರೊಡನೆ ನಲಿವ ಚೆಲುವ ಮೂರುತಿ ಬಾರೋ

ಮಂದರಗಿರಿ ಎತ್ತಿದಂಥ ಇಂದಿರೆ ರಮಣನೆ ಬಾರೋ
ಕುಂದದೆ ಗೋವುಗಳ ಕಾಯಿದ ಪುಂಡರೀಕಾಕ್ಷನೆ ಬಾರೋ

ನಾರಿಯರ ಮನೆಗೆ ಪೋಗುವ ವಾರಿಜನಾಭನೆ ಬಾರೋ
ಈರೇಳು ಭುವನವ ಕಾಯುವ ಮಾರನಯ್ಯನೆ ಬಾರೋ

ಶೇಷಶಯನ ಮೂರುತಿಯಾದ ವಾಸುದೇವನೆ ಬಾರೋ
ದಾಸರೊಳು ದಾಸನಾದ ಪುರಂದರವಿಠಲ ಬಾರೋ




1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ವೇಂಕಟಾಚಲನಿಲಯಂ - Venkatachala nilayam

ವೇಂಕಟಾಚಲನಿಲಯಂ ವೈಕುಂಠಪುರವಾಸಂ
ಪಂಕಜನೇತ್ರಂ ಪರಮಪವಿತ್ರಂ
ಶಂಖಚಕ್ರಧರ ಚಿನ್ಮಯರೂಪಂ

ಅಂಬುಜೋದ್ಭವ ವಿನುತಂ ಅಗಣಿತಗುಣನಾಮಂ
ತುಂಬುರುನಾರದ ಗಾನವಿಲೋಲಂ
ಅಂಬುಧಿಶಯನಂ ಆತ್ಮಾಭಿರಾಮಂ

ನೌಮಿ ಪಾಂಡವ ಪಕ್ಷಂ ಕೌರವಮದಹರಣಂ
ಬಾಹು ಪರಾಕ್ರಮಪೂರ್ಣಂ
ಅಹಲ್ಯಾಶಾಪ ಭಯನಿವಾರಣಂ

ಸಕಲ ವೇದ ವಿಚಾರಂ ಸರ್ವಜೀವ ನಿಕರಂ
ಮಕರಕುಂಡಲಧರ ಮದನಗೋಪಾಲಂ
ಭಕ್ತ ಪೋಷಕ ಶ್ರೀಪುರಂದರವಿಠಲಂ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

4. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ



ವೆಂಕಟರಮಣನೆ ಬಾರೊ - Venkataramanane baaro

ವೆಂಕಟರಮಣನೆ ಬಾರೊ ಶೇಷಾಚಲವಾಸನೆ ಬಾರೊ ||
ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೊ||

ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ 
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೊ

ಮಂದರಗಿರಿಯನೆತ್ತಿದಾನಂದ ಮೂರ್ತಿಯೇ ಬಾರೊ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೊ

ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೊ
ಕೋಮಳಾಂಗ ಶ್ರೀಪುರಂದರವಿಠಲನೆ ಸ್ವಾಮಿರಾಯನೆ ಬಾರೊ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ವೃಂದಾವನವೇ ಮಂದಿರವಾಗಿಹ - Vrundaavanave mandiravaagiha

ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ |ಪ|

ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ  |ಅ.ಪ|

ತುಳಸಿಯ ವನದಲಿ ಹರಿ ಇಹನೆಂಬುದ ಶೃತಿ ಸಾರುತಿದೆ ಕೇಳಿ
ತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿ
ತುಳಸಿ ಸ್ಪರ್ಶವ ಮಾಡೆ, ದೇಹಪಾವನವೆಂದು ತಿಳಿದುದಿಲ್ಲವೇ ಪೇಳಿ
ತುಳಸಿ ಸ್ಮರಣೆ ಮಾಡಿ ಸಕಲ ಇಷ್ಟವ ಪಡೆದು ಸುಖದಲಿ ನೀವು ಬಾಳಿ |೧|

ಮೂಲಮೃತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕವಶವಹುದು
ಮಾಲೆ ಕೊರಳಲಿಟ್ಟ ಮನುಜಗೆ ಮುಕುತಿಯ ಮಾರ್ಗವು ತೋರುವುದು
ಕಾಲಕಾಲಗಳಲ್ಲಿ ಮಾಡುವ ದುಷ್ಕರ್ಮ ಕಳೆದು ಬಿಸಾಡುವುದು
ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು ||೨||

ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ
ಪರಮಭಕ್ತರ ಘೋರ ಪಾಪಗಳ ತರಿದು ಪಾವನಮಾಡುವ ತುಳಸಿ
ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷಗೊಳಿಪ ತುಳಸಿ
ಪುರಂದರವಿಠಲನ ಚರಣ ಕಮಲಗಳ ಸ್ಮರಣೆ ಕೊಡುವ ತುಳಸಿ ||೩||


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ - Lolalotte ella lolalotte

ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ

ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಗ ಲೊಳಲೊಟ್ಟೆ ದೊಡ್ಡ
ಕ್ಷೋಣೀಶನೆಂಬುದು ಲೊಳಲೊಟ್ಟೆ

ಮುತ್ತು ಮಾಣಿಕ್ಯ ಲೊಳಲೊಟ್ಟೆ ಚಿನ್ನ
ಛತ್ರ ಚಾಮರ ಧ್ವಜ ಲೊಳಲೊಟ್ಟೆ
ಸುತ್ತಗಲಕೋಟೆ ಲೊಳಲೊಟ್ಟೆ
ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ

ಕಂಟಕರೆಂಬೋರು ಲೊಳಲೊಟ್ಟೆ ನಿನ್ನ
ನೆಂಟರು ಇಷ್ಟರು ಲೊಳಲೊಟ್ಟೆ
ಉಂಟಾದ ಗುಣನಿಧಿ ಪುರಂದರವಿಠಲನ
ಬಂಟನಾಗದವ ಲೊಳಲೊಟ್ಟೆ

ಲಂಗೋಟಿ ಬಲು ಒಳ್ಳೆದಣ್ಣ - langoti balu olledanna

ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರ
ಹಂಗಿಲ್ಲದೆ ಮಡಿಗೆ ಒದುಗುವುದಣ್ಣ

ಬಡವರಿಗಾಧಾರವಣ್ಣ ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ

ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದು ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ

ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ

ಮೋಕ್ಷಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್ ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ
ರಕ್ಷಣೆಗೆ ಬಹು ರಮ್ಯವಾಗಿರುವಂಥ

ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ಧರಿಸಿದಂಥ

ರೊಕ್ಕ ಎರಡಕ್ಕು- Rokka eradakku

ರೊಕ್ಕ ಎರಡಕ್ಕು ದುಃಖ ಕಾಣಕ್ಕ

ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ತಿನಿಸೋದು ರೊಕ್ಕ
ಕಕ್ಕುಲಾತಿಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತ ಕಾಣಕ್ಕ

ನೆಂಟರ ಇಷ್ಟರ ಮರೆಸೋದು ರೊಕ್ಕ
ಕಂಟಕಗಳ ಪರಿಹರಿಸೋದು ರೊಕ್ಕ
ಗಂಟು ಕಟ್ಟಲಿಕೆ ಕಲಿಸೋದು ರೊಕ್ಕ
ತುಂಟತನಗಳನು ಬಲಿಸೋದು ರೊಕ್ಕ

ಇಲ್ಲದ ಗುಣಗಳ ತರಿಸೋದು ರೊಕ್ಕ
ಸಲ್ಲದ ನಾಣ್ಯವ ನಡಿಸೋದು ರೊಕ್ಕ
ಬೆಲ್ಲಕ್ಕಿಂತಲು ಬಹು ಸವಿ ರೊಕ್ಕ
ಇಲ್ಲದಿರಲು ಬಹು ದುಃಖ ಕಾಣಕ್ಕ

ಉಂಟಾದ ಗುಣಗಳ ಮರೆಸೋದು ರೊಕ್ಕ
ಬಂಟರನೆಲ್ಲರ ಬರಿಸೋದು ರೊಕ್ಕ
ಕಂಠಿ ಸರಿಗೆಯನು ಗಳಿಸೋದು ರೊಕ್ಕ
ಒಂಟೆ ಕುದುರೆ ಆನೆ ತರಿಸೋದು ರೊಕ್ಕ

ವಿದ್ಯದ ಮನುಜರ ಕರೆಸೋದು ರೊಕ್ಕ
ಹೊದ್ದಿದ ಜನರನು ಬಿಡಿಸೋದು ರೊಕ್ಕ
ಮುದ್ದು ಪುರಂದರವಿಠಲನ ಮರೆಸುವ
ಬಿದ್ದು ಹೋಗೋ ರೊಕ್ಕವ ಸುಡು ನೀನಕ್ಕ

ರಾಮ ಮಂತ್ರವ ಜಪಿಸೊ - Rama mantrava japiso

ರಾಮ ಮಂತ್ರವ ಜಪಿಸೊ ಏ ಮನುಜಾ
ರಾಮ ಮಂತ್ರವ ಜಪಿಸೊ

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಭೆ ಭೀದಿ ಭೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ

ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಹೀನಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ

ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೇ ಮೂಲಮಂತ್ರ
ಭಕುತಿರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖನಿಧಿ ಪುರಂದರವಿಠಲನ ಮಾಹಾ ಮಂತ್ರ



1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ರಾಮ ರಾಮ ರಾಮ ರಾಮ ರಾಮನೆನ್ನಿರೋ - Rama Rama Rama Rama Ramanenniro

ರಾಮ ರಾಮ ರಾಮ ರಾಮ ರಾಮನೆನ್ನಿರೋ
ರಾಮ ರಾಮವೆಂಬ ನಾಮ ಮನದಿ ನೆನೆಯಿರೊ

ಇಂದ್ರಿಯಂಗಳೆಲ್ಲ ಕೂಡಿಬಂದು ತನ್ನ ಮುಸುಕಿದಾಗ
ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು

ಭರದಿ ಯಮನ ಭಟರು ಬಂದು ಹೊರಡು ಎಂದು ಮೆಟ್ಟಲು
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ

ಕಾಸ ಶ್ವಾಸದಲ್ಲಿ ಸಿಲುಕಿ ದೋಷಬಲಿದು ಹೋಗುವಾಗ
ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ

ಸಿಂಗಾರವಾದ ದೇಹ ತಂಗಿ ಬಿಟ್ಟು ಪೋಗುವಾಗ
ಕಂಗಳಿಗಾತ್ಮ ಸೇರಿದಾಗ ರಂಗನ ಧ್ಯಾನ ದೊರಕದಯ್ಯ

ಕಷ್ಟ ಜನ್ಮದಲ್ಲಿ ಬಂದು ದುಷ್ಟ ಕರ್ಮಗಳನು ಮಾಡಿ
ಬಿಟ್ಟು ಹೋಗುವಾಗ ಪುರಂದರವಿಟ್ಠಲನ ನೆನೆ ಮನವೆ


ರಾಗ: ಬಿಲಹರಿ                                                  ತಾಳ: ಛಾಪು