ಮಂದಗಮನೆ ಇವನಾರೆ ಪೇಳಮ್ಮ

ಮಂದಗಮನೆ ಇವನಾರೆ ಪೇಳಮ್ಮ
ಮಂದರಧರೆ ಗೋವಿಂದ ಕಾಣಮ್ಮ

ಕೆಂದಳಿರು ನಖ ಶಶಿಬಿಂಬ ಪದಪದ್ಮ
ಅಂದುಗೆ ಇಟ್ಟವನಾರೆ ಪೇಳಮ್ಮ
ಅಂದು ಕಾಳಿಂಗನ ಹೆಡೆಯ ತುಳಿದ ದಿಟ್ಟ
ನಂದನ ಕಂದ ಮುಕುಂದ ಕಾಣಮ್ಮ

ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ
ಕಡಗ ಕಂಕಣವಿಟ್ಟವನಾರಮ್ಮ
ಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-
ಳೊಡನೆ ತೋರಿದ ಜಗದೊಡೆಯ ಕಾಣಮ್ಮ

ನೀರದ ನೀಲದಂತೆಸೆವ ವಕ್ಷದಿ ಕೇ-
ಯೂರ ಹಾರನಿಟ್ಟವನಾರಮ್ಮ
ನೀರೆ ಕೇಳು ನಿರ್ಜರರಾದವರಿಗೆ
ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ

ಶಂಖ ಚಕ್ರವು ಗದೆ ಪದ್ಮ ಕೈಯೊಳಗಿಟ್ಟ
ಲಂಕರಿಸುವನೀತನಾರಮ್ಮ
ಪಂಕಜಮುಖಿ ಶ್ರೀ ಭೂದೇವಿಯರಸನು
ಶಂಕೆಯಿಲ್ಲದೆ ಗೋಪಿತನಯ ಕಾಣಮ್ಮ

ಕಂಬುಕಂಧರ ಕರ್ಣಾಲಂಬಿತಕುಂಡಲ
ಅಂಬುಜ ಮುಖದವನಾರೆ ಪೇಳಮ್ಮ
ರಂಭೆ ಕೇಳೀತ ಪುರಂದರವಿಟ್ಠಲ
ನಂಬಿದ ಭಕ್ತಕುಟುಂಬಿ ಕಾಣಮ್ಮ

                                                                                              ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಮಂಗಳ ಶ್ರೀತುಳಸಿದೇವಿಗೆ

ಮಂಗಳ ಶ್ರೀತುಳಸಿದೇವಿಗೆ
ಜಯ ಮಂಗಳ ವೃಂದಾವನದೇವಿಗೆ

ನೋಡಿದ ಮಾತ್ರಕೆ ದೋಷ ಸಂಹಾರಿಗೆ
ಬೇಡಿದ ವರಗಳ ಕೊಡುವವಳಿಗೆ
ಮಾಡೆ ವಂದನೆಯನು ಮನುಜರ ಪಾಪದ
ಗೂಡ ನೀಡಾಡುವ ಗುಣವಂತೆಗೆ

ಮುಟ್ಟಿದ ಮಾತ್ರಕೆ ಮುಕ್ತರ ಮಾಡುವ
ಮುದದಿಂದುದ್ಧರಿಸುವ ಮುನಿವಂದೈಗೆ
ಕೊಟ್ಟರೆ ನೀರನು ಬೇರಿಗೆ ಕಾಲನ
ಮುಟ್ಟಿಲೀಸದ ಹಾಗೆ ಮಾಳ್ಪಳಿಗೆ

ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ
ಚಿತ್ತವಲ್ಲಭ ಕೃಷ್ಣನ್ಹರುಷದಲಿ
ಅತ್ಯಂತವಾಗಿ ತಾ ತೋರಿ ಭವದ ಬೇರ
ಕಿತ್ತು ಬಿಸಾಡುವ ಕೋಮಲೆಗೆ

ಕೋಮಲವಾಗಿದ್ದ ದಳಮಂಜರಿಗಳ
ಪ್ರೇಮದಿಂದಲಿ ತಂದು ಶ್ರೀಹರಿಗೆ
ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ
ಕಾಮಿತಾರ್ಥವನೀವ ಸದ್ಗುಣಿಗೆ

ಕಾಷ್ಠವ ತಂದು ಗಂಧವ ಮಾಡಿ ಕೃಷ್ಣಗೆ
ನಿಷ್ಠಯಿಂದಲಿ ಲೇಪನ ಮಾಳ್ಪರ
ಜ್ಯೇಷ್ಠರೆನಿಸಿ ವೈಕುಂಠದಿ ನಿಲಿಸಿ ಸಂ
ತುಷ್ಟರ ಮಾಡುವ ಸೌಭಾಗ್ಯಗೆ

ಅನ್ನವನುಂಡರು ನೀಚರ ಮನೆಯಲ್ಲಿ
ಉನ್ನತ ಪಾಪವ ಮಾಡಿದ್ದರೂ
ತನ್ನ ದಳವನೊಂದ ಕರ್ಣದಲ್ಲಿಟ್ಟರೆ
ಧನ್ಯರ ಮಾಡುವ ದಯವಂತೆಗೆ

ಸರಸಿಜನಾಭನ ಸಲಿಗೆಯ ರಾಣಿಗೆ
ಶರಣಜನರ ಪೊರೆವ ಸದ್ಗುಣಿಗೆ
ತಿರುಪತಿ ನಿಲಯ ಶ್ರೀಪುರಂದರವಿಠಲನ
ಚರಣಸೇವಕಳಾದ ಚಿನ್ಮಯೆಗೆ

ಮಂಗಳ ಮಾರಮಣನಿಗೆ

ಮಂಗಳ ಮಾರಮಣನಿಗೆ ಶುಭಮಂಗಳ ಭೂರಮಣನಿಗೆ
ಜಯ ಮಂಗಳಂ ನಿತ್ಯ ಶುಭಮಂಗಳಂ

ಮುಕುಟಕ್ಕೆ ಮಂಗಳ ಮತ್ಸ್ಯಾವತಾರಗೆ
ಮುಖಕೆ ಮಂಗಳ ಮುದ್ದು ಕೂರ್ಮನಿಗೆ
ಸುಕಂಠಕ್ಕೆ ಮಂಗಳ ಸೂಕರ ರೂಪಗೆ
ನಖಕೆ ಮಂಗಳ ಮುದ್ದು ನರಸಿಂಹಗೆ

ವಕ್ಷಕೆ ಮಂಗಳ ವಟುವಾಮನಗೆ
ಪಕ್ಷಕೆ ಮಂಗಳ ಭಾರ್ಗವಗೆ
ಕಕ್ಷೆಗೆ ಮಂಗಳ ಕಾಕುತ್ಸ್ಥ ರಾಮನಿಗೆ
ಕುಕ್ಷಿಗೆ ಮಂಗಳ ಸಿರಿಕೃಷ್ಣಗೆ

ಊರುಗಳಿಗೆ ಮಂಗಳ ಉತ್ತಮ ಬೌದ್ಧಗೆ
ಚರಣಕ್ಕೆ ಮಂಗಳ ಚಲುವ ಶ್ರೀಕಲ್ಕಿಗೆ
ಪರಿಪರಿರೂಪಗೆ ಪರಮ ಮಂಗಳ ನಮ್ಮ
ಪುರಂದರವಿಠಲಗೆ ಶುಭಮಂಗಳ

ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ

ನಿಗಮವ ತಂದಾ ಮತ್ಸ್ಯಾವತಾರಗೆ
ನಗವ ಬೆನ್ನಲಿ ಪೊತ್ತ ಕೂರ್ಮನಿಗೆ
ಜಗವನುದ್ಧರಿಸಿದ ವರಾಹಾವತಾರಗೆ
ಮಗುವಿನ ಕಾಯ್ದ ಮುದ್ದು ನರಸಿಂಹಗೆ

ಭೂಮಿಯ ದಾನವ ಬೇಡಿದಗೆ
ಮಹಾ ಅರಸರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯ ಅರಸ ಗೋಪಾಲಕೃಷ್ಣಗೆ

ಬತ್ತಲೆ ನಿಂತಿಹ ಬುದ್ಧನಿಗೆ
ಉತ್ತಮ ಹಯವನೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹಿದ

ನಿತ್ಯ ಶ್ರೀ ಪುರಂದರವಿಠಲನಿಗೆ

ಭ್ರಷ್ಟರಾದರು ಮನುಜರು

ಭ್ರಷ್ಟರಾದರು ಮನುಜರು

ಅಷ್ಟ ಮದ ಗರ್ವದಲಿ ಹರಿಸ್ಮರಣೆಯನು ಮರೆತು

ಮಡದಿ ಮಾತನು ಕೇಳಿ ನಡೆದುಕೊಂಬನು ಭ್ರಷ್ಟ
ಪಡೆದ ಜನನಿಯನು ಬೈಯುವನು ಭ್ರಷ್ಟ
ಕಡವ ಕೊಟ್ಟವರೊಡನೆ ಧಡಿತನ ಮಾಡುವ ಭ್ರಷ್ಟ
ಬಡವರಿಗೆ ಕೊಟ್ಟ ನುಡಿ ನಡೆಸದವ ಭ್ರಷ್ಟ

ಬಾರದೊಡವೆಗಳನ್ನು ಬಯಸುವನು ತಾ ಭ್ರಷ್ಟ
ಸೇರದವರೊಡನೆ ಸ್ನೇಹಿಸುವ ಭ್ರಷ್ಟ
ಶೌರಿದಿನ ವ್ರತವನಾಚರಿಸದವನತಿ ಭ್ರಷ್ಟ
ನಾರಿಯರ ನೆಚ್ಚಿದಾ ನರನು ಕಡು ಭ್ರಷ್ಟ

ತಂತ್ರವನು ಅರಿಯದೆ ಮಂತ್ರ ಮಾಡುವ ಭ್ರಷ್ಟ
ಮಂತ್ರವಿಲ್ಲದ ವಿಪ್ರನತಿ ಭ್ರಷ್ಟನು
ಅಂತರವನರಿಯದೆ ನುಡಿದವನು ಭ್ರಷ್ಟ ಸ್ವ-
ತಂತ್ರವಿಲ್ಲದೆ ಕಾರ್ಯ ನಡೆಸುವನು ಭ್ರಷ್ಟ

ಹರಿಚರಿತ್ರೆಗಳನ್ನು ಜರಿದಾಡುವವ ಭ್ರಷ್ಟ
ಹರಿಯ ಶರಣರ ನೋಡಿ ನಿಂದಿಸುವ ಭ್ರಷ್ಟ
ಗುರುಹಿರಿಯರ ಪಾದಕ್ಕೆರಗದವ ಭ್ರಷ್ಟ
ನೆರೆಹೊರೆಯರನು ನೋಡಿ ಕುರುಬುವನು ಭ್ರಷ್ಟ

ಹರಿನಾಮವನು ದಿನದಿ ಸ್ಮರಿಸದಾತನು ಭ್ರಷ್ಟ
ಕರುಣವಿಲ್ಲದ ವಿಪ್ರನವ ಭ್ರಷ್ಟನು
ಕರುಣಾಳು ನಮ್ಮ ಸಿರಿ ಪುರಂದರವಿಠಲನ
ಚರಣಕಮಲವ ಸ್ಮರಿಸದವ ಭ್ರಷ್ಟನಯ್ಯ

ಭಾಷೆ ಹೀನರ ಸಂಗವಭಿಮಾನ ಭಂಗ

ಭಾಷೆ ಹೀನರ ಸಂಗವಭಿಮಾನ ಭಂಗ
ಬೇಸತ್ತು ಬೇಲಿಯ ಮೇಲೊರಗಿದಂತೆ

ಹಸಿವೆಗಾರದೆ ಬೆಕ್ಕು ಹತ್ತಿಯನು ಮೆದ್ದಂತೆ
ತೃಷೆಗಾರದೆ ಜೋಗಿ ತೆವರ ತೋಡಿದಂತೆ
ಬಿಸಿಲಿಗಾರದೆ ಕೋತಿ ಬಂಡೆಮೇಲ್ಕುಳಿತಂತೆ
ಕುಸುಬೆಯ ಹೊಲದಲ್ಲಿ ಕಳ್ಳ ಹೊಕ್ಕಂತೆ

ಮಳೆಯ ರಭಸಕೆ ಅಂಜಿ ಮರವೇರಿ ಕುಳಿತಂತೆ
ಛಳಿಯ ತಾಳದೆ ಜಲದಿ ಮುಳುಗಿದಂತೆ
ಹುಳುವಿನಂಜಿಕೆಗೆ ಹೋಗಿ ಹುತ್ತದಲಿ ಕುಳಿತಂತೆ
ಎಳೆನರಿಯು ಒಂಟೆಯ ತುಟಿಗೆ ಜೋತಂತೆ

ಭಾಷೆ ಹೀನರ ಆಸೆ ಪುರುಷ ನಾರಿಯ ವೇಷ
ಬಿಸಿಲು ಹಣ್ಣನು ಮೆದ್ದು ಬಳಲುತಿಹರು
ವಸುಧೆಯೊಳು ಪುರಂದರವಿಠಲನ ನೆರೆ ನಂಬಿ
ಕುಶಲದಲಿ ಸುಖಿಯಾಗಿ ಬಾಳೆಲವೊ ಮನುಜ

ಭಾರತಿದೇವಿಯ ನೆನೆ ನೆನೆ

ಭಾರತಿದೇವಿಯ ನೆನೆ ನೆನೆ
ನಿರುತ ಭಕುತಿಗಿದು ಮನೆ ಮನೆ

ಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ
ಸಾರಸಾಕ್ಷಿ ಕೃಪಾಂಗಿ ಅಪಾಂಗಿ

ಕಿಂಕಿಣಿ ಕಿಣಿಪಾದ ಪಂಕಜನೂಪುರ
ಕಂಕಣ ಕುಂಡಲಾಲಂಕೃತ ದೇಹ

ಶಂಕರ ಸುರವರ ವಂದಿತ ಚರಣೆ
ಕಿಂಕರಿ ಪುರಂದರವಿಟ್ಠಲ ಕರುಣೆ


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಭಯನಿವಾರಣವು ಶ್ರೀಹರಿಯ ನಾಮ

ಭಯನಿವಾರಣವು ಶ್ರೀಹರಿಯ ನಾಮ
ಜಯಪಾಂಡುರಂಗವಿಟ್ಠಲ ನಿನ್ನ ನಾಮ

ಧಾರಿಣೀದೇವಿಗಾಧಾರವಾಗಿಹ ನಾಮ
ನಾರದರು ನಲಿನಲಿದು ನೆನೆವ ನಾಮ
ಘೋರಪಾತಕಿ ಅಜಾಮಿಳನ ಸಲಹಿದ ನಾಮ
ತಾರಕವು ಬ್ರಹ್ಮ-ಭವರಿಗೆ ನಿನ್ನ ನಾಮ

ಮೊರೆಯ ಲಾಲಿಸಿ ಮುನ್ನ ಗಜವ ಸಲಹಿದ ನಾಮ
ಕರುಣದಿಂ ದ್ರೌಪದಿಯ ಕಾಯ್ದ ನಾಮ
ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ
ಪರತತ್ತ್ವ ಇಹಕಲ್ಲವೇ ನಿನ್ನ ನಾಮ

ಚರಣದಲಹಲ್ಯೆಯ ಸೆರೆಯ ಬಿಡಿಸಿದ ನಾಮ
ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ
ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ
ಸ್ಮರಿಪ ಜನರಿಗೆ ಸಮಸ್ತವನಿತ್ತ ನಾಮ

ಚಂದ್ರಶೇಖರ ಗಿರಿಜೆಗೊಲಿದ ಸಿರಿಹರಿನಾಮ
ಬಂದಾ ವಿಭೀಷಣನ ಪಾಲಿಸಿದ ನಾಮ
ಕಂದ ಮುಚುಕುಂದನಿಗೆ ಕಾಮಿತವನಿತ್ತ ನಾಮ
ಸಂದ ಪಾಂಡವಪಕ್ಷ ಪಾವನವು ನಾಮ

ಅಖಿಳವೇದಪುರಾಣ ಅರಸಿ ಕಾಣದ ನಾಮ
ಸಕಲ ಯೋಗಿಜನಕೆ ಸೌಖ್ಯನಾಮ
ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ
ರುಕುಮಿಣೀಯರಸ ವಿಟ್ಠಲ ನಿನ್ನ ನಾಮ

ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ
ಮುಕ್ತಿಮಾರ್ಗಕೆ ಯೋಗ್ಯ ಹರಿ ನಿನ್ನ ನಾಮ
ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ
ಚಿತ್ತಜನ ಪೆತ್ತ ಶ್ರೀಹರಿಯ ನಾಮ

ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ-
ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ
ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ
ನಾರಾಯಣ ಕೃಷ್ಣ ಹರಿ ನಿನ್ನ ನಾಮ

ಹೊಂದಿದ ಭಕ್ತವೃಂದವ ಸಲಹಿದಾ ನಾಮ
ತಂದು ಅಮೃತವ ಸುರರಿಗೆರೆದ ನಾಮ
ಅಂದಂಬರೀಷನನು ಕಾಯ್ದ ಶ್ರೀಹರಿನಾಮ
ತಂದೆ ಪುರಂದರವಿಠಲ ಹರಿ ನಿನ್ನ ನಾಮ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ



ಭಂಡನಾದೆನು ನಾನು ಸಂಸಾರದಿ

ಭಂಡನಾದೆನು ನಾನು ಸಂಸಾರದಿ

ಕಂಡು ಕಾಣದ ಹಾಗೆ ಇರಬಹುದೆ ಹರಿಯೆ

ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡೆಕಾರರ ಮನೆಗೆ ಬಲು ತಿರುಗಿದೆ
ಶುಂಡಾಲನಂತೆನ್ನ ಮತಿ ಮಂದವಾಯಿತು
ಪುಂಡರೀಕಾಕ್ಷ ನೀ ಕರುಣಿಸಯ್ಯ ಬೇಗ

ನಾನಾ ವ್ರತಗಳನು ಮಾಡಿ ನಾ ಬಳಲಿದೆನು
ಏನಾದರೂ ಎನಗೆ ಫಲವಿಲ್ಲವಯ್ಯ
ಆ ನಾಡು ಈ ನಾಡು ಸುತ್ತಿ ನಾ ಕಂಗೆಟ್ಟೆ
ಇನ್ನಾದರೂ ಕೃಪೆಯ ಮಾಡಯ್ಯ ಹರಿಯೆ

ಬುದ್ಧಿಹೀನರ ಮಾತ ಕೇಳಿ ನಾ ಮರುಳಾದೆ
ಶುದ್ಧಿಯಿಲ್ಲದೆ ಮನವು ಕೆಟ್ಟುಹೋಯ್ತು
ಉದ್ಧಾರಕ ಪುರಂದರವಿಟ್ಠಲನ ತತ್ತ್ವದ
ಸಿದ್ಧಿಯನು ದಯೆಗೈದು ಉದ್ಧರಿಸು ಹರಿಯೆ



ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ