ಜೋ ಜೋ ಶ್ರೀ ಕೃಷ್ಣ ಪರಮಾನಂದ


ಜೋ ಜೋ ಶ್ರೀ ಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ
ಮುಕುಂದ ಜೋ ಜೋ

ಪಾಲಗಡಲೊಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಶಿಶುವೆ
ಶ್ರೀಲತಾಂಗಿಯಳ ಚಿತ್ತದೊಲ್ಲಭನೆ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ

ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಥಳಿಸುವ ಗುಲಗಂಜಿಯ ಮಾಲೆ
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೆ ನಿನ್ನ ಪಾಡಿ ತೂಗುವೆನಯ್ಯ ಜೋ ಜೋ

ಯಾರ ಕಂದ ನೀನಾರ ನಿಧಾನಿ
ಯಾರ ರತ್ನವೊ ನೀನಾರ ಮಾಣಿಕವೊ
ಸೇರಿತು ಎನಗೊಂದು ಚಿಂತಾಮಣಿಯೆಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ

ಗುಣನಿಧಿಯೆ ನಿನ್ನನೆತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖನಿದ್ರೆಯ ತಂದುಕೊ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋ ಜೋ

ಅಂಡಜವಾಹನ ಅನಂತಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ್ನ
ಹಿಂಡು ದೈವದ ಗಂಡ ಉದ್ದಂಡನೆ
ಪಾಂಡುರಂಗ ಶ್ರೀ ಪುರಂದರವಿಠಲ ಜೋ ಜೋ 

ಜಾಲಿಯ ಮರದಂತೆ ಧರೆಯೊಳು ದುರ್ಜನರು


ಜಾಲಿಯ ಮರದಂತೆ ಧರೆಯೊಳು ದುರ್ಜನರು

ಮೂಲಾಗ್ರ ಪರಿಯಂತೆ ಮುಳ್ಳು ಕೂಡಿಪ್ಪಂತೆ

ಬಿಲಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ


ಊರ ಹಂದಿಗೆ ಷಡ್ರಸಾನ್ನವನಿಕ್ಕಲು
ನಾರುವ ದುರ್ಗಂಧ ಬಿಡಬಲ್ಲುದೆ
ಘೋರಪಾಪಿಗೆ ತತ್ವಜ್ಞಾನವ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ


ತನ್ನಿಂದ ಉಪಕಾರ ತೊಟಕಾದರು ಇಲ್ಲ
ಬಿನ್ನಾಣದ ಮಾತಿಗೆ ಕೊನೆಯಿಲ್ಲ
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿಠಲ

ಜಯಮಂಗಳಂ ನಿತ್ಯ ಶುಭಮಂಗಳಂ


ಜಯಮಂಗಳಂ ನಿತ್ಯ ಶುಭಮಂಗಳಂ

ಇಂದೀವರಾಕ್ಷಗೆ ಇಭರಾಜವರದಗೆ
ಇಂದಿರಾರಮಣ ಗೋವಿಂದ ಹರಿಗೆ
ನಂದನ ಕಂದಗೆ ನವನೀತ ಚೋರಗೆ
ವೃಂದಾರಕೇಂದ್ರ ಉಡುಪಿಯ ಕೃಷ್ಣಗೆ

ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆ
ಮಾರನನು ಪಡೆದ ಮಂಗಲಮೂರ್ತಿಗೆ
ಚಾರುಚರಣದಿಂದ ಚೆಲುವ ಗಂಗೆಯ ಪಡೆದ
ಕಾರುಣ್ಯಮೂರ್ತಿ ಕೌಸ್ತುಭಧಾರಿಗೆ

ವ್ಯಾಸಾವತಾರಗೆ ವೇದ ಉದ್ಧಾರಗೆ
ವಾಸಿತಾನಂತಪದ ಸಕಲೇಶಗೆ
ವಾಸುದೇವನ ಮೂರ್ತಿ ಪುರಂದರವಿಟ್ಠಲಗೆ
ದಾಸರನು ಕಾಯ್ವ ರುಕ್ಮಿಣಿರಮಣಗೆ

ಜಯ ಜಾನಕೀಕಾಂತ ಜಯ ಸಾಧುಜನ ವಿನುತ


ಜಯ ಜಾನಕೀಕಾಂತ ಜಯ ಸಾಧುಜನ ವಿನುತ


ಜಯತು ಮಹಿಮಾನಂತ ಜಯ ಭಾಗ್ಯವಂತ ಜಯ ಜಯ


ದಶರಥನ ಮಗ ವೀರ ದಶಕಂಠ ಸಂಹಾರ
ಪಶುಪತೀಶ್ವರ ಮಿತ್ರ ಪಾವನ ಚರಿತ್ರ
ಕುಸುಮಬಾಣ ಸುರೂಪ ಕುಶಲಕೀರ್ತಿ ಕಲಾಪ
ಅಸಮ ಸಾಹಸ ಶಿಕ್ಷ ಅಂಬುಜದಳಾಕ್ಷ


ಸಾಮಗಾನಲೋಲ ಸಾಧುಜನ ಪರಿಪಾಲ
ಕಾಮಿತಾರ್ಥಪ್ರದಾತ ಕೀರ್ತಿ ಸಂಜಾತ
ಸೋಮಸೂರ್ಯಪ್ರಕಾಶ ಸಕಲ ಲೋಕಾಧೀಶ
ಶ್ರೀ ಮಹಾರಘುವೀರ ಸಿಂಧುಗಂಭೀರ


ಸಕಲ ಶಾಸ್ತ್ರವಿಚಾರ ಶರಣಜನ ಮಂದಾರ
ವಿಕಸಿತಾಂಬುಜವದನ ವಿಶ್ವಮಯಸದನ
ಸುಕೃತ ಮೋಕ್ಷಾಧೀಶ ಸಾಕೇತಪುರವಾಸ
ಭಕ್ತವತ್ಸಲ ರಾಮ ಪುರಂದರವಿಠಲ

ಜಯವದೆ ಜಯವದೆ ಈ ಮನೆತನಕೆ


ಜಯವದೆ ಜಯವದೆ ಈ ಮನೆತನಕೆ
ಬಿಡು ಬಿಡು ಬಿಡು ಬಿಡು ಮನ ಸಂಶಯವ
ಶಕುನೆಂಬಹಕ್ಕಿ ಹೇಳುತದಪ್ಪ
ಜಗವೆಂಬೋ ಗಿಡ ಹುಟ್ಟೈತಣ್ಣ
ಹಣ್ಣುಗಳೆರಡೂ ಐದಾವಪ್ಪ
ಮೂರು ಬುಡದ ಗಿಡ ಕೇಳಣ್ಣ
ಹಣ್ಣಿನ ಒಳಗೆ ನಾಲ್ಕು ರಸವು
ಐದು ದೊಡ್ಡ ಹರೆ ಕಾಣಪ್ಪ
ಆರು ಬಗೆಯ ಸ್ವರೂಪ ಕೇಳು
ಏಳು ಬಗೆಯ ತೊಗಟುಂಟಣ್ಣ
ಸಣ್ಣ ಗರಿಗಳು ಎಂಟೈದಾವೆ
ಅಕ್ಷವು ಇದಕೆ ಒಂಭತ್ತೈತೆ
ಎಲೆಗಳು ಹತ್ತು ಐದಾವಪ್ಪ
ಒಂದೇ ಹಕ್ಕಿ ಹಣ್ತಿಂತೈತೆ
ಮತ್ತೊಂದ್ಹಕ್ಕಿ ನೋಡುತದಪ್ಪ
ಹಣ್ತಿಂದ್ಹಕ್ಕಿ ಬಡವಾಗೈತೆ
ತಿನ್ನದ ಹಕ್ಕಿ ಬಲಿತೈತಣ್ಣ
ಸುಳ್ಳಲ್ಲ ನೀ ಕೇಳೋ ತಮ್ಮ
ದ್ವಾಸುಪರ್ಣದ ಶ್ರುತಿಯಲ್ಲೈತೆ
ಒಂದೇ ಕುಲದ ಹಕ್ಕಲ್ಲಣ್ಣ
ಒಂದೇ ಕುಲವೆಂದು ತಿಳಿಯಲಿ ಬೇಡ
ತಿಳಿದರೆ ನಿಮಗೆ ಕೇಡಾದೀತು
ಹಳೇ ವಸ್ತ್ರವ ಬಿಸಾಡಣ್ಣ
ಹೊಸ ವಸ್ತ್ರವ ನಿಮಗೆ ದೇವರು ಕೊಟ್ಯಾನು
ಹಕ್ಕಿಯರಸ ಆಡಿದ ಮಾತು
ಉತ್ತಮ ಮಾರ್ಗವ ಹಿಡಿಯೊ ತಮ್ಮಾ
ಮಾರ್ಗವ ಕಟ್ಟಿ ಸುಲಿಯುತ್ತಾರೆ
ಗಿರಿ ದುರ್ಗಂಗಳು ಐದಾವಪ್ಪ
ಮಾರನೆಂಬ ಕಳ್ಳೈದಾನೆ
ಸಮೀರನಾದರೆ ಹೊರಟೋಗ್ತಾನೆ
ಪುರಂದರನಾದರೆ ಬಿಡುವೊನಲ್ಲ
ಸುರಜೇಷ್ಠನ ಸಂಗತಿ ಹಿಡಿಯೋ ತಮ್ಮಾ
ಕಣ್ಣು ಮೂಗು ಕಿವಿ ನಾಲಿಗೆಯಪ್ಪ
ಒಂದೊಂದೊಬ್ಬರ ಕೊಂದಾವಣ್ಣ
ಕುರಂಗ ಮಾತಂಗ ಪತಂಗವು ಕೇಳೋ
ಭೃಂಗ ಮೀನಾ ಹತವಾದವಣ್ಣ
ಜ್ಞಾನ ಭಕ್ತಿಯೆಂಬ ಮಾರ್ಗವು ಎರಡು
ದೊಡ್ಡ ಮಾರ್ಗವ ಹಿಡಿಬೇಕಣ್ಣ
ದೊಡ್ಡ ಸಂಗತಿ ಬರುವೋತನಕ
ಎರಡೂ ಮನೆಯಲ್ಲಿರಬೇಕಣ್ಣ
ದಾನದ ಕೈಯ ತೋರಿಸಬೇಕು
ಅದರಿಂದ ನದಿಯ ದಾಟುತಿಯಪ್ಪ
ನಿನ್ನ ಯೋಗ್ಯತೆ ತಿಳಿದಮೇಲೆ
ಪುರಂದರವಿಠಲ ಸ್ಠಳ ಕೊಟ್ಟಾನು

ಜಂಗಮರು ನಾವು ಜಗದೊಳು


ಜಂಗಮರು ನಾವು ಜಗದೊಳು

ಜಂಗಮರು ನಾವು ಲಿಂಗಾಂಗಿಗಳು
ಮಂಗಳವಂತರು ಭವಿಗಳೆಂತೆಂಬಿರಿ


ಹರ ಗುರುದೈವ ಕೇಶವ ನಮ್ಮ ಮನೆದೈವ
ವರದ ಮೋಹನ ಗುರು ಶಾಂತೇಶ
ಹರ ಗುರು ದ್ರೋಹ ಮಾಡಿದ ಪರವಾದಿಯು
ರೌರವ ನರಕದಿ ಮುಳುಗುವುದೆ ಸಿದ್ಧ


ವಿಭೂತಿ ನಮಗುಂಟು ವಿಶ್ವೇಶ ನಮಗುಂಟು
ಶೋಭನ ನಾಮ ಮುದ್ರೆಗಳುಂಟು
ಶ್ರೀ ಭಾಗೀರಥಿಯಗಣಿತ ಮಜ್ಜನವುಂಟು
ಸೌಭಾಗ್ಯವೀವ ಮಹಂತನ ಮಠದವರು


ವಿರಕ್ತರು ನಾವು ಶೀಲವಂತರು ನಾವು
ವೀರಭದ್ರ ಪ್ರಿಯುಭಕ್ತರು ನಾವು
ಕಾರಣಕರ್ತ ಶ್ರೀಪುರಂದರವಿಠಲನ
ಕಾರುಣ್ಯಕೆ ಮುಖ್ಯ ಪಾತ್ರರು ನಾವು

ಚೋರಗೆ ಚಂದ್ರೋದಯ ಸೊಗಸುವುದೆ?


ಚೋರಗೆ ಚಂದ್ರೋದಯ ಸೊಗಸುವುದೆ?
ಜಾರೆಗೆ ಸೂರ್ಯೋದಯ ಸೊಗಸುವುದೆ?
ಶ್ರೀರಮಣನ ಕಥೆಯು ಹೀನಗೆ ಮೆಚ್ಚುವುದೆ?
ನಾರಿಯ ನಯನವಿಲ್ಲದ ಚೆಲುವಿಕೆಯು
ಹರಿಸ್ಮರಣವಿಲ್ಲದ ಹಾಡಿಕೆಯು
ಅರಣ್ಯರೋದನವಯ್ಯ ಪುರಂದರವಿಠಲ

ಚಿಂತೆ ಯಾತಕೊ


ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ
ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ

ಏಳುತುದಯ ಕಾಲದಲ್ಲಿ
ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ
ಹಾಲ ಕೊಟ್ಟು ಸಲಹಿತೆ?

ಸಡಗರದಲಿ ನಾರಿಜನರು
ಹಡೆಯುವಾಗ ಸೂಲಗಿತ್ತಿ
ಅಡವಿಯೊಳಗೆ ಹೆರುವ ಮೃಗವ
ಪಿಡಿದು ರಕ್ಷಣೆ ಮಾಳ್ಪರಾರು

ಹೆತ್ತ ತಾಯಿ ಸತ್ತ ಶಿಶುವು
ಮತ್ತೆ ಕೆಟ್ಟಿತೆಂಬರು ಜನರು
ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ-
ನಿತ್ತು ರಕ್ಷಣ ಮಾಡುವರಾರು

ಗಟ್ಟಿ ಮಣ್ಣಿನ ಶಿಶುವ ಮಾಡಿ
ಹೊಟ್ಟೆಯೊಳಗೆ ಇರಿಸುವಂಥ
ಕೊಟ್ಟ ದೈವ ಕೊಂಡೊಯ್ದರೆ
ಕುಟ್ಟಿಕೊಂಡು ಅಳುವುದೇಕೆ

ನಂಬಿಗೆಗಿವು ಸಾಲವೆಂದು
ಹಂಬಲಿಪುದು ಲೋಕವೆಲ್ಲ
ನಂಬಿ ಪುರಂದರವಿಠಲ-
ನೆಂಬ ನಾಮ ನುಡಿದ ಮೇಲೆ

ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ ನಮೋ ನಮೋ


ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ ನಮೋ ನಮೋ

ಸುಂದರ ಮೃಗವರ ಪಿನಾಕಧನುಕರ ಗಂಗಾತೀರ ಗಜಚರ್ಮಾಂಬರಧರ

ನಂದಿವಾಹನಾನಂದದಿಂದ ಮೂರ್ಜಗದಿ ಮೆರೆವ ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರ ನೀನೆ
ಇಂದಿರೇಶ ಶ್ರೀರಾಮನ ಪಾದವ ಚಂದದಿ ಪೊಗಳುವ ನೀನೆ

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೆ
ಕಾಲಕೂಟವನು ಪಾನಮಾಡಿದ ನೀಲಕಂಠನು ನೀನೆ
ಜಾಲಮಾಡಿದ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೆ
ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ

ಘಟಿಕಾಚಲದಿ ನಿಂತ ಪಟು ಹನುಮಂತನ



ಘಟಿಕಾಚಲದಿ ನಿಂತ ಪಟು ಹನುಮಂತನ
ಪಠನೆಯ ಮಾಡಲುತ್ಕಟದಿ ಪೊರೆವೆನೆಂದು


ಚತುರ ಯುಗದಿ ತಾನು ಮುಖ್ಯಪ್ರಾಣನು
ಚತುರಮುಖನಯ್ಯನ
ಚತುರ ಮೂರುತಿಗಳನು ಚತುರತನದಿ ಭಜಿಸಿ
ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತೆ


ಸರಸಿಜ ಭವಗೋಸ್ಕರ ಕಲ್ಮಷದೂರ
ವರ ಚಕ್ರತೀರ್ಥ ಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
ಸ್ಥಿರಯೋಗಾಸನದಿ ಕರೆದು ವರಗಳ ಕೊಡುತೆ


ಶಂಖ ಚಕ್ರವ ಧರಿಸಿ ಭಕ್ತರ ಮನಃ-
ಪಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರವಿಠಲನ
ಬಿಂಕದ ಸೇವಕ ಸಂಕಟ ಕಳೆಯುತ

ಗೋವಿಂದಾ ನಿನ್ನಾನಂದ ಸಕಲ ಸಾಧನವೋ

ಗೋವಿಂದಾ ನಿನ್ನಾನಂದ ಸಕಲ ಸಾಧನವೋ


ಅಣುರೇಣು ತೃಣಕಾಷ್ಠ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವುದೆ ಆನಂದ


ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ
ಈ ಪರಿ ಮಹಿಮೆಯ ತಿಳಿಯೋದೆ ಆನಂದ


ಮಂಗಳಮಹಿಮ ಪುರಂದರವಿಟ್ಠಲ
ಹಿಂಗದೆ ದಾಸರ ಸಲಹೋದೆ ಆನಂದ

ಗೋವಿಂದ ನಮೋ ಗೋವಿಂದ ನಮೋ

ಗೋವಿಂದ ನಮೋ ಗೋವಿಂದ ನಮೋ
ಗೋವಿಂದ ನಾರಾಯಣ

ಗೋವರ್ಧನ ಗಿರಿಯನೆತ್ತಿದ ಗೊವಿಂದ ನಮ್ಮ ರಕ್ಷಿಸೈ

ಮಂಚ ಬಾರದು ಮಡದಿ ಬಾರಳು
ಕಂಚುಕನ್ನಡಿ ಬಾರವು
ಸಂಚಿತಾರ್ಥದ ದ್ರವ್ಯ ಬಾರದು
ಮುಂಚೆ ಮಾಡಿರೊ ಧರ್ಮವ

ಅರ್ಥವ್ಯಾರಿಗೆ ಪುತ್ರರ್ಯಾರಿಗೆ
ಮಿತ್ರ ಬಾಂಧವರ್ಯಾರಿಗೆ
ಕರ್ತೃ ಯಮನವರೆಳೆದು ಒಯ್ದಾಗ
ಅರ್ಥಪುತ್ರರು ಕಾಯ್ವರೆ

ತಂದು ಬಂದರೆ ತನ್ನ ಪುರುಷನ
ಬಂದಿರಾ ಬಳಲಿದಿರಾ ಎಂಬಳು
ಒಂದು ದಿವಸ ತಾರದಿದ್ದರೆ
ಹಂದಿನಾಯಂತೆ ಬೊಗಳ್ವಳು

ಪ್ರಾಣವಲ್ಲಭೆ ತನ್ನ ಪುರುಷನ
ಕಾಣದೆ ನಿಲ್ಲಲಾರಳು
ಪ್ರಾಣಹೋಗುವ ಸಮಯದಲ್ಲಿ
ಜಾಣೆ ಕರೆದರೆ ಬಾರಳು

ಉಂಟು ಕಾಲಕೆ ನಂಟರಿಷ್ಟರು
ಬಂಟರಾಗಿ ಕಾಯ್ದರು
ಕಂಟಕ ಯಮನವರು ಎಳೆವಾಗ
ನಂಟರಿಷ್ಟರು ಬಾರರು

ಒಡವೆ ಅರಸಿಗೆ ಒಡಲು ಅಗ್ನಿಗೆ
ಮಡದಿ ಮತ್ತೊಬ್ಬ ಚೆಲುವಗೆ
ಬಡಿದು ಹೊಡೆದು ಯಮನವರೆಳೆವಾಗ
ಎಡವಿ ಬಿದ್ದಿತು ನಾಲಗೆ

ದಿಟ್ಟತನದಲಿ ಪಟ್ಟವಾಳುವ
ಕೃಷ್ಣರಾಯನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ
ವಿಟ್ಠಲೇಶನ ಚರಣವ

ಗೋವಿಂದ ಎನ್ನಿರೊ ಹರಿ ಗೋವಿಂದ ಎನ್ನಿರೊ

ಗೋವಿಂದ ಎನ್ನಿರೊ ಹರಿ ಗೋವಿಂದ ಎನ್ನಿರೊ
ಗೋವಿಂದನ ನಾಮವ ಮರೆಯದಿರಿರೊ

ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು
ಸಂಭ್ರಮದರಸುಗಳೈದುಮಂದಿ
ಡಂಭಕತನದಿಂದ ಕಾಯುವ ಜೀವವ
ನಂಬಿ ನಚ್ಚಿ ಕೆಡಬೇಡಿ ಕಾಣಿರೊ

ನೆಲೆಯು ಇಲ್ಲದ ಕಾಯ ಎಲುವಿನ ಹಂದರವು
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವುಗಳು ಕ್ರಿಮಿಗಳು
ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ

ಹರ ಬ್ರಹ್ಮ ಸುರರಿಂದೆ ವಂದಿತನಾಗಿಪ್ಪ
ಹರಿಯೆ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಸ್ಮರಣೆಯ ಮಾಡಲು
ದುರಿತಭಯಂಗಳ ಪರಿಹರಿಸುವುದು

ಕೊಳಲನೂದುತ ಬಂದ

ಕೊಳಲನೂದುತ ಬಂದ
ನಮ್ಮ ಗೋಪಿಯ ಕಂದ
ಕೊಳಲನೂದುವದು ಬಲು ಚಂದ

ಆ ವಸುದೇವನ ಕಂದ ಇವ ನೋಡೆ
ದೇವಕಿ ಬಸಿರೊಳು ಬಂದ
ಮಾವ ಕಂಸನ ಕೊಂದ
ಭಾವಜನಯ್ಯ ಮುಕುಂದ

ಮುತ್ತಿನಾಭರಣ ತೊಟ್ಟು
ಹಸ್ತದಿ ಕೊಳಲನಿಟ್ಟು
ಕಸ್ತೂರಿ ತಿಲಕವನಿಟ್ಟು
ತುತ್ತುರ ತುರರೆಂಬ ನಾದವ ಪಿಡಿಯೆ

ಹಿಂದೆ ಗೋವುಗಳ ಹಿಂಡು
ಮುಂದೆ ಗೋಪಾಲರ ದಂಡು
ಹಿಂದಕ್ಕೆ ದೈತ್ಯರ ಕೊಂದ ಪು-
ರಂದರವಿಠಲನ ಚಂದ

ಕೊಡು ಬೇಗ ದಿವ್ಯಮತಿ ಸರಸ್ವತಿ

ಕೊಡು ಬೇಗ ದಿವ್ಯಮತಿ ಸರಸ್ವತಿ
ಕೊಡು ಬೇಗ ದಿವ್ಯಮತಿ
 

ಮೃಡಹರಿಹಯಮುಖರೊಡೆಯಳೆ ನಿನ್ನಯ
ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ


ಇಂದಿರಾರಮಣನ ಹಿರಿಯ ಸೊಸೆಯು ನೀನು
ಬಂದೆನ್ನ ವದನದಿ ನಿಂದು ನಾಮವ ನುಡಿಸೆ


ಅಖಿಳ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ
ಸುಖವಿತ್ತು ಪಾಲಿಸೆ ಸುಜನಶಿರೋಮಣಿ


ಪತಿತಪಾವನೆ ನೀ ಗತಿಯೆಂದು ನಂಬಿದೆ
ಸತತ ಪುರಂದರವಿಠಲನ ತೋರೆ

ಕೇಳೆನೊ ಹರಿ ತಾಳನೊ

ಕೇಳೆನೊ ಹರಿ ತಾಳನೊ

ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ

ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಡಂಭಕದ ಕೂಗಾಟ

ನಾನಾ ಬಗೆಯ ರಾಗ ಭಾವ ತಿಳಿದು ಸ್ವರ
ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮರಹಿತವಾದ
ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು

ಅಡಿಗಡಿಗಾನಂದ ಬಾಷ್ಪಪುಳಕದಿಂದ
ನಡೆ ನುಡಿಗೆ ಶ್ರೀಹರಿಯೆನ್ನುತ
ದೃಢಭಕ್ತರನು ಕೂಡಿ ಹರಿಕೀರ್ತನೆ ಪಾಡಿ
ಕಡೆಗೆ ಪುರಂದರವಿಠಲನೆಂದರೆ ಕೇಳ್ವ

ಕೆರೆಯ ನೀರನು ಕೆರೆಗೆ ಚೆಲ್ಲಿ

ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದಲಾದ ಭಾಗ್ಯವ
ಹರಿಸಮರ್ಪಣೆ ಮಾಡಿ ಬದುಕಿರೊ
ಸಿರಿಪುರಂದರವಿಠಲರಾಯನ
ಚರಣಕಮಲದ ನಂಬಿ ಬದುಕಿರೊ

ಕೆಟ್ಟೆನಲ್ಲೋ ಹರಿಯೆ

ಕೆಟ್ಟೆನಲ್ಲೋ ಹರಿಯೆ

ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯಬೇಡ

ಬಂದೆನು ನಾ ತಂದೆ ತಾಯಿಗಳುದರದಿ
ಒಂದು ಅರಿಯದೆ ಬಾಲಕತನದೊಳು
ಮುಂದುವರಿದ ಯೌವನದೊಳು ಸತಿಸುತ-
ರಂದವ ನೋಡುತ ನಿನ್ನ ನಾ ಮರೆತೆನೊ

ಸ್ನಾನ ಸಂಧ್ಯಾವನವು ಹೀನವಾಯಿತು ಬಹು-
ಮಾನವಿಲ್ಲದೆ ಕುಲಹೀನರಾಶ್ರಯದಿಂದ
ಜ್ಞಾನಿಗಳೊಡನಾಟವಿಲ್ಲದೆ ಮನದೊಳು
ದಾನಧರ್ಮದ ಬಟ್ಟೆಗಾಣದೆ ಮರೆತೆನೊ

ಮೊದಲೆ ಬುದ್ಧಿಯು ಹೀನವದರೊಳು ವೃದ್ಧಾಪ್ಯ
ಕದನವು ದಶದಿಕ್ಕಿನುದಯದ ರಾಯರ
ಎದೆನೀರು ಬತ್ತಿತ್ತು ಅದರಿಂದ ನಿನ್ನಯ
ಪದಪದ್ಮಯುಗಳದ ತುದಿಯ ನಾ ಮರೆತೆನೊ

ಮೂಢನಾದೆನೊ ನಿನ್ನ ಬೇಡಿಕೊಳ್ಳದೆ ನಾನು
ಕಾಡೊಳಗಾಡುವ ಕಪಿಯಂತೆ ಜೀವಿಸಿ
ಗೂಡೊಳಗಿರುತಿಹ ಗೂಬೆಯ ತೆರನಂತೆ
ಮಾಡದೆ ನಿನ್ನಯ ಸ್ಮರಣೆಯ ಮರೆತೆನೊ

ಬುದ್ಧಿಹೀನನು ನಾನು ಉದ್ಧರಿಸೆಲೋ ದೇವ
ಮುದ್ದು ಶ್ರೀ ಪುರಂದರವಿಠಲನೆ ಎನ್ನ
ಬುದ್ಧಿಯೊಳಡಗಿದ್ದು ತಿದ್ದಿಟ್ಟು ನಡೆಸಯ್ಯ
ಪೊದ್ದುವೆ ನಿನ್ನಯ ಚರಣಾರವಿಂದವ

ಕೆಟ್ಟು ನೆಂಟರ ಸೇರುವುದು ಬಲು ಕಠಿಣ

ಕೆಟ್ಟು ನೆಂಟರ ಸೇರುವುದು ಬಲು ಕಠಿಣ ಇನ್ನು
ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ

ವಿಷವ ಕುಡಿಯಲಿಬಹುದು ಎಸೆದ ಶೂಲದ ಮುಂದೆ
ಒಸಗಿ ಬಹು ಬೇಗದಿ ಹಾಯಬಹುದು
ವಿಷದ ಕುಂಡದ ಒಳಗೆ ಮುಳುಗಿಕೊಂಡಿರಬಹುದು
ಎಸೆವ ಅಂಬಿಗೆ ಎದೆಯ ಗುರಿಮಾಡಬಹುದು

ಶರಧಿ ಧುಮುಕಲಿಬಹುದು ಉರಗನಪ್ಪಲುಬಹುದು
ಊರ ಮಾರಿಗೆ ಗ್ರಾಸವಾಗಲಿಬಹುದು
ಪುರುಷಮೃಗ ಮೇಲ್ವಾಯ್ದು ಬರೆ ಶಿರವ ಕೊಡಬಹುದು
ಗರಗಸದಲಿ ಕೊರಳ ಕೊಯಿಸಿಕೊಳಬಹುದು

ಕುಡುಗೋಲು ಪಿಡಿದು ಕೂಲಿಯ ಮಾಡಿ ಉಣಬಹುದು
ಒಡಲಿಗಾಗಿ ಹುಡಿಯ ಮುಕ್ಕಬಹುದು
ಪೊಡವಿಯೊಳು ಪುರಂದರವಿಟ್ಠಲರಾಯನ
ಕಡು ಹರುಷದಿ ಭಜಿಸಿ ಸುಖಿಯಾಗಬಹುದು

ಕೃಷ್ಣ ಬಾರೊ ಕೃಷ್ಣ ಬಾರೊ

ಕೃಷ್ಣ ಬಾರೊ ಕೃಷ್ಣ ಬಾರೊ
ಕೃಷ್ಣ ನೀ ಬಾರಯ್ಯ

ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ

ಮನ್ಮಥಜನಕನೆ ಬೇಗನೆ ಬಾರೊ
ಕಮಲಾಪತಿ ನೀ ಬಾರೊ
ಅಮಿತಪರಾಕ್ರಮ ಶಂಕರ ಬಾರೊ
ಕಮನೀಯಗಾತ್ರನೆ ಬಾರಯ್ಯ ದೊರೆಯೆ

ಸುರುಳು ಕೇಶಗಳ ಒಲಿವ ಅಂದ
ಭರದ ಕಸ್ತೂರಿತಿಲಕದ ಚಂದ
ಶಿರದಿ ಒಪ್ಪುವ ನವಿಲು ಕಣ್ಗಳಿಂದ
ತರತರದಾಭರಣಗಳ ಧರಿಸಿ ನೀ ಬಾರೊ

ಹಾಲು ಬೆಣ್ಣೆಗಳ ಕೈಯಲಿ ಕೊಡುವೆ
ಮೇಲಾಗಿ ಭಕ್ಷ್ಯಗಳ ಬಚ್ಚಿಟ್ಟು ತರುವೆ
ಜಾಲಮಾಡದೆ ನೀ ಬಾರಯ್ಯ ಮರಿಯೆ
ಬಾಲ ಎನ ತಂದೆ ಪುರಂದರವಿಠಲ

ಒಂದೇ ಕೂಗಳತೆ ಭೂ ವೈಕುಂಠ


ಒಂದೇ ಕೂಗಳತೆ ಭೂ ವೈಕುಂಠ
ಸಂದೇಹವಿಲ್ಲವು ಸಾಧು ಸಜ್ಜನರಿಗೆ

ಅಂಬರೀಷನು ದ್ವಾದಶಿವ್ರತ ಮಾಡಲು
ಡೊಂಬೆಯ ಮಾಡಿದ ದುರ್ವಾಸನು
ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆ
ಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು

ಕರಿರಾಜ ವನದಲಿ ಉಳುಹೆಂದು ಕೂಗಲು
ತ್ವರಿತದಿಂದಲಿ ಬಂದು ಕಾಯ್ದ ತಾನು
ಕರುಣಸಾಗರ ಕೃಷ್ಣ ಕಾಯಬೇಕೆನುತಲೆ
ತರಳ ಪ್ರಹ್ಲಾದನ ಕಂಬದಿಂ ಬಂದುದು

ದ್ರುಪದರಾಯನ ಪುತ್ರಿಗಾಪತ್ತು ಬರಲು
ಕೃಪೆಯಿಂದಲಕ್ಷಯವಿತ್ತನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆದರ ಹೃದಯವೇ ವೈಕುಂಠ

ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ


ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ
ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ
ಒಂದು ಕಾಲದಲ್ಲಿ ಮೃಷ್ಟಾನ್ನವುಣಿಸುವೆ
ಒಂದು ಕಾಲದಲ್ಲಿ ಉಪವಾಸವಿರಿಸುವೆ
ನಿನ್ನ ಮಹಿಮೆಯ ನೀನೆ ಬಲ್ಲೆಯೊ ದೇವ
ಪನ್ನಗಶಯನ ಶ್ರೀಪುರಂದರವಿಠಲ

ಏಳೇಳು ಶರಧಿಯು ಏಕವಾಗಿದೆ ಕಂಡ್ಯ

ಏಳೇಳು ಶರಧಿಯು ಏಕವಾಗಿದೆ ಕಂಡ್ಯ 
ಹ್ಯಾಗೆ ಬಂದೆ ಹೇಳೊ ಕೋತಿ

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹ್ಯಾಗೆ ಬಿಟ್ಟರು ಹೇಳೊ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದೆನೊ ಭೂತ

ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹ್ಯಾಂಗೆ ಬಿಟ್ಟಳು ಹೇಳೊ  ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ

ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹ್ಯಾಗೆ ಬಿಟ್ಟರು ಹೇಳೊ  ಕೋತಿ
ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು
ಕೊಂದ್ಹಾಕಿ ಬಂದೆನೊ ಭೂತ

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಳೊ
ಅವಳ ನೋಡಬಂದೆ ಭೂತ

ದಕ್ಷಿಣಪುರಿ ಲಂಕಾ ದಾನವರಿಗಲ್ಲದೆ
ತ್ರ್ಯಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆ ಎನಗಿಲ್ಲ
ಈ ಕ್ಷಣದಿ ತಪ್ಪಿಸಿಕೊಂಡೆ ಭೂತ

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ಯಾತಕೊ ಕೋತಿ
ನಾ ತಾಳಿಕೊಂಡಿಹೆನೊ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ

ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟು ಮಂದಿದ್ದಾರೊ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯನುಕೋಟಿಯೊ ಭೂತ

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂಬೆ
ಯಾವರಸಿನ ಭಂಟ ಕೋತಿ
ಚೆಲ್ವಯೋಧ್ಯಾಪುರದರಸು ಜಾನಕಿಪತಿ
ರಾಮಚಂದ್ರನ ಭಂಟ ಭೂತ

ಸಿರಿ ರಾವಚಂದ್ರನು ನಿನ್ನರಸನಾದರೆ
ಆತ ಮುನ್ನಾರು ಹೇಳೊ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ
ಶ್ರೀ ಪುರಂದರವಿಠಲನೊ ಭೂತ

ಏನು ಮಾಡಿದರೇನು ಭವ ಹಿಂಗದು

ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ
 
ಅರುಣೋದಯದಲೆದ್ದು ಅತಿ ಸ್ನಾನಗಳ ಮಾಡಿ
ಬೆರಳೆಣಿಸಿದೆ ಅದರ ನಿಜವರಿಯದೆ
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ
ಹರಿ ನಿನ್ನ ಕರುಣಕಟಾಕ್ಷವಾಗದನಕ

ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿ ಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೆನೆಂದು ಕಾಯ ದಂಡಿಸಿದೆನೊ
ರತಿಪತಿಪಿತ ನಿನ್ನ ದಯವಾಗದನಕ

ಧ್ಯಾನವನು ಮಾಡಿದೆನು ಮೌನವನು ತಾಳಿದೆನು
ನಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥ ಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ

ಏನು ಮಾಡಲೊ ಮಗನೆ ಯಾಕೆ ಬೆಳಗಾಯಿತೊ

ಏನು ಮಾಡಲೊ ಮಗನೆ ಯಾಕೆ ಬೆಳಗಾಯಿತೊ
ಏನು ಮಾಡಲೊ ಕೃಷ್ಣಯ್ಯ

ಏನು ಮಾಡಲಿ ಇನ್ನು ಮಾನಿನಿಯರು ಎನ್ನ
ಮಾನವ ಕಳೆಯುವರೊ ರಂಗಯ್ಯ

ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ
ಮೇಲಿನ ಕೆನೆಗಳ ಮೆದ್ದನೆಂಬುವರೊ
ಬಾಲಕರೆಲ್ಲರ ಬಡಿದನೆಂಬರೊ ಎಂಥ
ಕಾಳ ಹೆಂಗಸು ಇವನ ಹಡೆದಳೆಂಬುವರೊ

ಕಟ್ಟೆದ್ದ ಕರುಗಳ ಬಿಟ್ಟನೆಂತೆಂಬರೊ
ಮೆಟ್ಟೆ ಸರ್ಪನ ಮೇಲೆ ಕುಣಿದನೆಂಬುವರೊ
ಪುಟ್ಟ ಬಾಲೆಯರ ಮೋಹಿಸಿದನೆಂಬರೊ ಎಂಥ
ದುಷ್ಟ ಹೆಂಗಸು ಇವನ ಹಡೆದಳೆಂಬುವರೊ

ಗಂಗಾಜನಕ ನಿನ್ನ ಜಾರನೆಂತೆಂಬರೊ
ಶೃಂಗಾರಮುಖ ನಿನ್ನ ಬರಿದೆ ದೂರುವರೊ
ಮಂಗಳಮಹಿಮ ಶೀಪುರಂದರವಿಟ್ಠಲ
ಹಿಂಗದೆ ಎಮ್ಮನು ಸಲಹೆಂತೆಂಬರೊ

ಏನು ಮರುಳಾದೆಮ್ಮ ಎಲೆ ರುಕ್ಮಿಣಿ

ಏನು ಮರುಳಾದೆಮ್ಮ ಎಲೆ ರುಕ್ಮಿಣಿ
ಹೀನಕುಲ ಗೊಲ್ಲ ಶ್ರೀ ಗೋಪಾಲಕೃಷ್ಣಗೆ

ಹಾಸಿಕಿಲ್ಲದೆ ಹಾವಿನ ಮೇಲೆ ಒರಗಿದವ
ಹೇಸಿಕಿಲ್ಲದೆ ಕರಡಿಯ ಕೂಡಿದ
ಗ್ರಾಸಕಿಲ್ಲದೆ ತೊತ್ತಿನ ಮಗನ ಮನೆಲುಂಡ
ದೋಷಕಂಜದೆ ಮಾವನ ಸಿರವ ತರಿದವಗೆ

ಕುಂಡಗೋಳಕರ ಮನೆ ಕುಲದೈವವೆನಿಸಿದಗೆ
ಮಂಡೆ ಬೋಳರ ಮನಕೆ ಮನದೈವವ
ಹಿಂಡು ಗೊಲ್ಲರ ಮನೆ ಹಿರಿಯನೆಂದೆನಿಸುವ
ಭಂಡಾಟದ ಗೊಲ್ಲ ಈ ಬಳಗದೊಳಗೆಲ್ಲ

ಒಬ್ಬರಲ್ಲಿ ಹುಟ್ಟಿ ಒಬ್ಬರಲ್ಲಿ ಬೆಳೆದ
ಒಬ್ಬರಿಗೆ ಮಗನಲ್ಲ ಜಗದೊಳಗೆಲ್ಲ
ಅಬ್ಬರದ ದೈವ ಶ್ರೀ ಪುರಂದರವಿಟ್ಠಲನ
ಉಬ್ಬುಬ್ಬಿ ಮದುವ್ಯಾದೆ ಉತ್ಸಾಹದಿಂದ 


ಏನು ಬರೆದೆಯೊ ಬ್ರಹ್ಮ

ಏನು ಬರೆದೆಯೊ ಬ್ರಹ್ಮ ನೀನೆಷ್ಟು ನಿರ್ದಯನೊ ಅಭಿ-
ಮಾನವನು ತೊರೆದು ಪರರನ್ನು ಬೇಡುವುದ

ಗೇಣೊಡಲು ಪೊರೆವುದಕೆ ಪೋಗಿ ಪರರನು ಪಂಚ-
ಬಾಣಸಮ ರೂಪ ನೀನೆಂದು ಪೊಗಳೆ
ಆಣೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು
ಗಾಣ ತಿರುಗುವ ಎತ್ತಿನಂತೆ ಬಳಲುವುದ

ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು
ಸೊಲ್ಲು ಸೊಲ್ಲಿಗೆ ಅವರ ಕೊಂಡಾಡುತ
ಇಲ್ಲ ಈ ವೇಳೆಯಲಿ ತಿರುಗಿ ಬಾರೆಂದೆನಲು
ಅಲ್ಲವನು ತಿಂದ ಇಲಿಯಂತೆ ಕೊರಗುವುದ

ಹಿಂದೆ ಬರೆದ ಬರಹ ಹೇಗಾದರಾಗಲಿ
ಮುಂದೆನ್ನ ವಂಶದಲಿ ಜನಿಸುವರ ಕಾಯೊ
ಸಂದೇಹಿಸಲಿಬೇಡ ಪುರಂದರವಿಟ್ಠಲ 
ಕಂದರ್ಪ ಜನಕ ಉಡುಪಿಯ ಕೃಷ್ಣನಾಣೆ

ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೊ

ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೊ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ
ಸಾಟಿಯಿಲ್ಲದೆ ಪೂರ್ಣಗುಣಳು ಶ್ರೇಷ್ಠವಾಗಿ ಮಾಡುತಿಹಳು

ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು
ಚಿತ್ರಚರಿತನಾದ ಹರಿಯ ನಿತ್ಯ ಸೇವೆ ಮಾಡುತಿಹಳು

ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷ ರಹಿತನಾದ
ಗರುಡಗಮನನಾದ ಪುರಂದರವಿಟ್ಠಲನ್ನ ಸೇವಿಸುವಳು 

ಏತರ ಚೆಲುವ ರಂಗಯ್ಯ


ಏತರ ಚೆಲುವ ರಂಗಯ್ಯ
ಹರಿಯೆಂಬ ಮಾತಿಗೆ ಮರುಳಾದೆನಲ್ಲದೆ

ದೇಶಕೋಶಗಳುಳ್ಳೊಡೆ ತಾ ಕ್ಷೀರವಾ
ರಾಶಿಯೊಳಗೆ ಮನೆ ಕಟ್ಟುವನೆ
ಹಾಸುವುದಕೆ ಹಾಸಿಗೆಯುಳ್ಳೊಡೆ ತಾ
ಶೇಷನ ಬೆನ್ನಲಿ ಮಲಗುವನೆ ರಂಗ

ಬುದ್ದಿಯ ಪೇಳುವ ಪಿತನುಳ್ಳೊಡೆ ಬೆಣ್ಣೆ
ಕದ್ದು ಚೋರನೆಂದೆನಿಸುವನೆ
ಬದ್ಧವಾಹನ ತನಗಿದ್ದರೆ ಹಾರುವ
ಹದ್ದಿನ ಮೇಲೇರಿ ತಿರುಗುವನೆ ರಂಗ

ಹಡೆದ ತಾಯಿ ತನಗುಳ್ಳೊಡೆ ಗೋಪರ
ಒಡಗೂಡಿ ತುರು ಹಿಂಡು ಕಾಯುವನೆ
ಮಡದಿಯು ಉಳ್ಳೊಡೆ ಅಡವಿಯೊಳಾಡುವ
ಹುಡುಗಿಯರ ಸಂಗ ಮಾಡುವನೇ ರಂಗ

ಸಂಗಡ ಉದಿಸಿದ ಅಣ್ಣನಿದ್ದರೆ ನರ-
ಸಿಂಗನ ರೂಪವ ಧರಿಸುವನೆ
ಅಂಗದ ಮೇಲಿನ ಆಸೆಯಿದ್ದೊಡೆ ಕಾ-
ಳಿಂಗನ ಮಡುವಿಲಿ ಧುಮುಕುವನೆ ರಂಗ

ಸಿರಿಯುಳ್ಳೊಡೆ ಪೋಗಿ ಬಲಿಯ ಬಾಗಿಲ ಕಾಯ್ದು
ಧರೆಯ ದಾನಕೆ ಕೈ ಒಡ್ಡುವನೆ
ದೊರೆಯು ತಾನಾದರೆ ಪಾಂಡುಕುಮಾರನ
ತುರಗ ಬಂಡಿಯ ಬೋವನಾಗುವನೆ ರಂಗ

ಮದನಜನಕ ತಾನು ಸೊಬಗುಳ್ಳನಾದರೆ
ಮುದುಕಿ ಕುಬುಜೆಯನು ಕೂಡುವನೆ
ಮುದದಿ ತಾ ಪರದೈವವೆನಿಸಿಕೊಂಡ
ಚದುರ ಶೀ ಪುರಂದರವಿಠಲ ಅಮ್ಮಮ್ಮ

ಏಕೆ ದೇಹವನು ದಂಡಿಸುವೆ ವೃಥಾ


ಏಕೆ ದೇಹವನು ದಂಡಿಸುವೆ ವೃಥಾ ಬಿಡ-
ದೇಕಚಿತ್ತದಿ ಲಕ್ಷ್ಮೀಕಾಂತ ಹರಿ ಎನ್ನದೆ

ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ
ಮೌನವನು ಪಿಡಿದು ಬಕಪಕ್ಷಿಯಂತೆ
ಹೀನಬುದ್ದಿಗಳ ಯೋಚಿಸಿ ಕುಳಿತು ಫಲವೇನು
ದಾನವಾಂತಕನ ನಾಮಕೆ ಮೌನವುಂಟೆ?

ಜಪವ ಮಾಡುವೆನೆನುತ ಕಪಟಬುದ್ದಿಯ ಬಿಡದೆ
ಗುಪಿತದಿಂದಲಿ ನೀನು ಕುಳಿತು ಫಲವೇನು
ಅಪರಿಮಿತಮಹಿಮ ಶ್ರೀನಾರಾಯಣೆಂದರೆ
ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ

ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ
ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ?
ಸಂದೇಹವೇಕೆ ನೀನೊಂದು ಕ್ಷಣವಗಲದೆ
ತಂದೆ ಶ್ರೀಪುರಂದರವಿಠಲನ ನೆನೆ ಮನವೆ