ಏಕೆ ಚಿಂತಿಸುವೆ ಬರಿದೆ ಮರುಳೆ

ಏಕೆ ಚಿಂತಿಸುವೆ ಬರಿದೆ ಮರುಳೆ 
ವಿಧಿ ಬರೆದ ವಾಕು ತಪ್ಪದು 
ಎಂದಿಗೂ ಮರುಳೆ 

ಹುಟ್ಟುವುದಕಿಂತ ಮೊದಲೆ ತಾಯ ಸ್ತನ 
ದಿಟ್ಟ ಕ್ಷೀರವನು ಉಂಡು 
ತೊಟ್ಟಿಲೊಳು ಮಲಗುವಾಗ ಗಳಿಸಿ ತಂ-
ದಿಟ್ಟು ನೀನುಣುತಿದ್ದೆಯೊ ಮರುಳೆ 

ಉರಗ ವೃಶ್ಚಿಕ ಪಾವಕ ಕರಿ ನಂಜು 
ಅರಸು ಹುಲಿ ಚೊರಭಯವು 
ಹರಿಯಾಜ್ಞೆಯಿಂದಲೇನೆ ನೀನು ಮಹಾ 
ಶರಧಿ ಪೋಕ್ಕರು ಬಿಡದು ಮರುಳೆ 

ಇಂತು ಸುಖದುಃಖಂಗಳಿಗೆ ಸಿಲುಕಿ ನೀ 
ಭ್ರಾಂತನಾಗಿ ಕೆಡಲು ಬೇಡ 
ಸಂತೋಷದಿಂದರ್ಚಿಸಿ ಪೂಜಿಸು 
ಕಂತುಪಿತ ಶ್ರೀಪುರಂದರವಿಠಲನ 

ಎಲ್ಲಿ ಹರಿಕಥಾ ಪ್ರಸಂಗವೋ


ಎಲ್ಲಿ ಹರಿಕಥಾ ಪ್ರಸಂಗವೋ
ಅಲ್ಲಿ ಗಂಗೆ-ಯಮುನೆ-ಗೋದಾ-ಸರಸ್ವತಿ ಸಿಂಧು
ಎಲ್ಲ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವವು
ವಲ್ಲಭ ಶ್ರೀಪುರಂದರ ವಿಠಲ ಮೆಚ್ಚುವನು


ಜಯ ಜಯ ಹರಿಯೆಂಬುದೆ ಸುದಿನವು
ಜಯ ಹರಿಯೆಂಬುದೆ ತಾರಬಲವು
ಜಯ ಹರಿಯೆಂಬುದೆ ಚಂದ್ರಬಲವು
ಜಯ ಹರಿಯೆಂಬುದೆ ವಿಧ್ಯಾಬಲವು
ಜಯ ಹರಿಯೆಂಬುದೆ ದೈವಬಲವು
ಜಯಹರಿ ಪುರಂದರವಿಠಲನ ಬಲವಯ್ಯ ಸುಜನರಿಗೆ

ಎಲ್ಲಿ ಶ್ರೀತುಳಸಿಯ ವನವು


ಎಲ್ಲಿ ಶ್ರೀತುಳಸಿಯ ವನವು 
ಅಲ್ಲೊಪ್ಪುವರು ಸಿರಿ-ನಾರಾಯಣರು 

ಗಂಗೆ ಯಮುನೆ ಗೋದಾವರಿ ಕಾವೇರಿ 
ಕಂಗೊಳಿಸುವ ಮನಿಕರ್ಣಿಕೆಯು 

ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ 
ಸಂಗಡಿಸುತ ವ್ರುಕ್ಷಮೂಲದಲ್ಲಿರುವವು 

ಸರಸಿಜಭವ ಭವ ಸುರಪ ಪಾವಕ ಚಂ-
ದಿರ ಸೂರ್ಯ ಮೊದಲಾದವರು 
ಸಿರಿರಮಣನ ಆಜ್ಞೆಯಲಿ ಅಗಲದಂತೆ 
ತರುಮಧ್ಯದೊಳು ನಿತ್ಯ ನೆಲಸಿಪ್ಪರು 

ಋಗ್ವೇದ ಯಜುರ್ವೇದ ಸಾಮ ಅಥರ್ವಣ 
ಅಗ್ಗಳಿಸಿದ ವೇದಘೋಷಗಳು 
ಅಗ್ರಭಾಗದಲಿದೆ ಬೆಟ್ಟದೊಡೆಯನಲ್ಲಿ 
ಶೀಘ್ರದಿ ಒಲಿವ ಶ್ರೀಪುರಂದರವಿಠಲ 

ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ


ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ 
ಸೊಲ್ಲಿಗೆ ಶರಣರ ಕಥೆಗಳ ಪೇಳುತ 
ಅಲ್ಲದ ನುಡಿಯನು ನುಡಿಯುವಿರಲ್ಲ 


ಕಾವಿಯನುಟ್ಟು ತಿರುಗುವಿರಲ್ಲ ಕಾಮವ ಬಿಡಲಿಲ್ಲ 
ನೇಮನಿಷ್ಟೆಗಳ ಮಾಡುವಿರಲ್ಲ ತಾಮಸ ಬಿಡಲಿಲ್ಲ 
ತಾವೊಂದರಿಯದೆ ಆಗಮ ತಿಳಿಯದೆ 
ಶ್ವಾನನ ಕುಳಿಯಲಿ ಬೀಳುವಿರಲ್ಲ 


ಗುರುಗಳ ಸೇವೆ ಮಾಡಿದಿರಲ್ಲ ಗುರುತಾಗಲಿಲ್ಲ 
ಪರಿಪರಿ ದೇಶವ ತಿರುಗಿದಿರಲ್ಲ ಪೋರೆಯುವರಿನ್ನಿಲ್ಲ 
ಅರಿವೊಂದರಿಯದೆ ಆಗಮ ತಿಳಿಯದೆ 
ನರಕ ಕೂಪದಲಿ ಬೀಳುವಿರಲ್ಲ 


ಬ್ರಹ್ಮ ಜ್ಞಾನಿಗಳು ಎನಿಸುವಿರಲ್ಲ ಹಮ್ಮು ಬಿಡಲಿಲ್ಲ 
ಸುಮ್ಮನೆ ಯಾಗವ ಮಾಡುವಿರಲ್ಲ  ಸುಳ್ಳನು ಬಿಡಲಿಲ್ಲ 
ಗಮ್ಮನೆ ಪುರಂದರವಿಠಲನ ಪಾದಕೆ 
ಹೆಮ್ಮೆ ಬಿಟ್ಟು ನೀವೆರಗಲೆ ಇಲ್ಲ 

ಎರವಿನ ಸಿರಿಗೆ ಬಿಮ್ಮನೆ ಬೆರೆತ


















ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ 
ಕಡೆದರುಂಟೆ  ಬೆಣ್ಣೆ ಜೀವವೆ 
ಉರಗನ ಹೆಡೆಯ ನೆಳಲ ಸೇರಿದ ಕಪ್ಪೆ 
ಸ್ತಿರಕಾಲ ಬಾಳ್ವುದೆ ಜೀವವೆ 

ಸತಿ ಸುತರೆಂದು ನೆಚ್ಚಲು ಬೇಡ ಮನದೊಳು 
ಹಿತವರೊಬ್ಬರ ಕಾಣೆ ಜೀವವೆ 
ವೃಥಾ ನೀನು ಕೆಡಬೇಡ ಮರಣವು ತಪ್ಪದು 
ನಾಥ ದಶಕಂಠಗಾದರು ಜೀವವೆ 

ಆಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ-
ಸ್ತ್ರಿಸಂಗವು ಬೇಡ ಜೀವವೆ 
ಏಸೇಸು ಜನ್ಮಾಂತರ ಕಳೆದುಳಿದರು 
ಈ ಸಾವು ತಪ್ಪದು ಜೀವವೆ 

ಆನೆ ಕುದುರೆ ಮಂದಿ ಶಾನೆ ಭಂಡಾರವು 
ಏನು ಪಡೆದರಿಲ್ಲ ಜೀವವೆ 
ಮಾನ ಸಹ ಸರ್ವ ಹರಿಗೆ ಅರ್ಪಣ ಮಾಡಿ 
ಪುನಿತನಾಗಿರು ಜೀವವೆ 

ಕೆರೆಯ ಕಟ್ಟಿಸು ಮತ್ತೆ ಪೂದೋಟ ಹಾಕಿಸು 
ಸೆರೆಯ ಬಿಡಿಸಲದು ಪುಣ್ಯ ಜೀವವೆ 
ಕರೆಯದೆ ಮನೆಗೆ ಬಂದವರಿಗನ್ನವ ನೀಡು 
ಪರಲೋಕ ಸಾಧನವದು ಜೀವವೆ 

ಸತ್ಯವಂತರ ಸಂಗದೊಳಗೆ ಚರಿಸೆ ಮೃತ್ಯು 
ಅತ್ತತ್ತಲಿರುವಳು ಜೀವವೆ 
ಸತ್ಯವಂತ ಸಿರಿಪುರಂದರವಿಠಲನೆನ್ನು 
ಸತ್ತು ಹುಟ್ಟುವುದಿಲ್ಲ ಜೀವವೆ 

ಎಂದೆಂದು ನಿನ್ನ ಪಾದವೆ ಗತಿ ಎನಗೆ

ಎಂದೆಂದು ನಿನ್ನ ಪಾದವೆ ಗತಿ ಎನಗೆ ಗೋ-
ವಿಂದ ಬಾರಯ್ಯ ಎನ್ನ ಹೃದಯಮಂದಿರಕೆ 

ಮೊದಲಿಂದ ಬರಲಾರದೆ ನಾ ಬಂದೆ 
ಇದರಿಂದ ಗೆದ್ದು ಪೋಪುದು ಕಾಣೆ ಮುಂದೆ 
ತುದಿ ಮೊದಲಿಲ್ಲದ ಪರರಿಂದ ನೊಂದೆ 
ಪದುಮನಾಭನೆ ತಪ್ಪು ಕ್ಷಮೆ ಮಾಡೊ ತಂದೆ 

ಹೆಣ್ಣು ಹೊನ್ನು ಮಣ್ಣಿನಾಸೆಗೆ ಬಿದ್ದು 
ಪುಣ್ಯ ಪಾಪವನು ನಾ ತಿಳಿಯದೆ ಇದ್ದು 
ಅನ್ಯಾಯವಾಯಿತು ಇದಕೇನು ಮದ್ದು 
ನಿನ್ನ ಧ್ಯಾನ ಎನ್ನ ಹೃದಯದೊಳಿದ್ದು 

ಹಿಂದೆ ನಾ ಮಾಡಿದ ಪಾಪವ ಕಳೆಯೆ 
ಮುಂದೆನ್ನ ಜನ್ಮ ಸಫಲ ಮಾಡಿ ಪೊರೆಯೆ 
ತಂದೆ ಶ್ರೀ ಪುರಂದರವಿಠಲನ್ನ ನೆನೆಯೆ 
ಎಂದೆಂದಿಗಾನಂದ ಸುಖವನ್ನೆ ಕರೆಯೆ 

ಎಂಥಾ ಪುಣ್ಯವೇ ಗೋಪಿ

ಎಂಥಾ ಪುಣ್ಯವೇ ಗೋಪಿ ಎಂಥಾ ಭಾಗ್ಯವೆ ನಿನ್ನ 
ಇಂಥಾ ಮಗನ ಕಾಣೆವೆ 

ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ 
ಚಿಂತೆಯಲ್ಲವು ಪೋಪುದೇ ಕೇಳೆ ಯಶೋದೆ 

ಸರಸಿಜನಾಭನ ಸುಮ್ಮನೆ ಕಂಡರೆ 
ದುರಿತವೆಲ್ಲವು ಪೋಪುದೇ
ಸರಸವಾಡುತ ಬಂದು ಸವಿ ಮಾತನಾಡಿದರೆ 
ಹರುಷ ಕೈಗೂಡುವುದೇ ಕೇಳೆ ಯಶೋದೆ 

ಊರೊಳಗೆ ಇವ ನೆರೆಹೊರೆಯರಂಜಿಕೆ 
ದೂರಿಕೊಂಬುವರಲ್ಲವೆ 
ಅರಣ್ಯದಲಿ ನಾವು ಆಡುವ ಆಟಗಳು 
ಆರಿಗಾದರು ಉಂಟೇನೆ ಕೇಳೆ ಯಶೋದೆ 

ನಿನ್ನ ಮಗನ ಕರೆಯೆ ಎಮ್ಮ ಪ್ರಾಣದ ದೊರೆಯ 
ಘನ್ನನು ಪರಬ್ರಹ್ಮನೆ 
ಚನ್ನ ಶ್ರೀ ಪುರಂದರವಿಟ್ಠಲರಾಯನ 
ನಿನ್ನಾಣೆ ಬಿಡಲಾರೆವೇ ಕೇಳೆ ಯಶೋದೆ