ಕಂಡೆ ನಾ ಗೋವಿಂದನ

ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ



ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯ್ತುತಾನಂತನ
ಸಾಸಿರನಾಮನ ಶ್ರೀ ಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ



ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲ ಜನ ಮುನಿವಂದ್ಯನ
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ



ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತ ವಜ್ರಪಂಜರನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆ ಬೇಲೂರ ಕೇಶವನ

ಕಂಡು ಕಂಡು ನೀ ಎನ್ನ ಕೈ ಬಿಡುವರೇ

ಕಂಡು ಕಂಡು ನೀ ಎನ್ನ ಕೈ ಬಿಡುವರೇ
ಪುಂಡರೀಕಾಕ್ಷ ಪುರುಷೋತ್ತಮ ಹರೇ


ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ


ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ನೊಂದೆ ನಾನು
ಸನಕಾದಿಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದವರದ ಶ್ರೀಕೃಷ್ಣಾ


ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ
ಭಕ್ತರಾಧೀನನಾಗಿರಬೇಡವೆ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ

ಆಡಿದನೊ ರಂಗ ಅದ್ಭುತದಿಂದಲಿ

ಆಡಿದನೊ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ

ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯಮಾಡುತಲಿ ನಲಿ-
ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ

ಅಂಬುರುಹೋದ್ಭವ ಅಖಿಲ ಸುರರು ಕೂಡಿ
ಅಂಬರದಲಿ ನಿಂತವರು ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು
ಚಂದದಿಂ ಭರತನಾಟ್ಯವ ನಟಿಸೆ
ಝಂತಟ ತಕಧಿಮಿ ತಧಿಗಣಿ ತೋಂ ಎಂದು

ಝಂಪೆತಾಳದಿ ತುಂಬುರನೊಪ್ಪಿಸೆ
ಧಾಮಪಪದಸರೀ ಎಂದು ಧ್ವನಿಯಿಂದ
ನಾರದ ತುಂಬುರರ್ಗಾನವ ಮಾಡಲು
ನಂದಿಯು ಚಂದದಿ ಮದ್ದಲೆ ಹಾಕಲು

ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು
ಘಣಘಣಿಸುತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ ಮುಖದೊಳು
ಚಲಿಸುವ ನೀಲಕೇಶಗಳಾಡೆ
ಕಾಲಲಂದಿಗೆ ಗೆಜ್ಜೆ ಘಲು ಘಲು
ಘಲುರೆನುತ ಉಡುಗೆಜ್ಜೆ ಘಂಟೆಗಳಾಡೆ

ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟ ಪಾದವ ಇಟ್ಟು ಶ್ರೀಕೃಷ್ಣನು
ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು

ಸುರರು ಪುಷ್ಪದ ವೃಷ್ಟಿಯ ಕರೆಯಲು
ಸುದತಿಯರೆಲ್ಲರು ಪಾಡಲು
ನಾಗಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು
ದಿಕ್ಕು ದಿಕ್ಕುಗಳಿಗೆ ಓಡಲು

ಚಿಕ್ಕವನಿವನಲ್ಲ ಪುರಂದರವಿಠಲ
ವೆಂಕಟರಮಣನ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ

ಗುಮ್ಮನ ಕರೆಯದಿರೆ ಅಮ್ಮ ನೀನು


ಗುಮ್ಮನ ಕರೆಯದಿರೆ ಅಮ್ಮ ನೀನು

ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ


ಹೆಣ್ಣುಗಳಿರುವಲ್ಲಿ ಪೋಗಿ ಅವರ
ಕಣ್ಣು ಮುಚ್ಚುವದಿಲ್ಲವೆ
ಚಿಣ್ಣರ ಬಡಿಯೆನು, ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ


ಬಾವಿಗೆ ಪೋಗೆ ಕಾಣೆ ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಲಿ ಕೂಡುವೆ

ಮಗನ ಮಾತ ಕೇಳಿ ಗೋಪಿದೇವಿ
ಮುಗುಳು ನಗೆ ನಗುತ
ಜಗದೊಡೆಯನ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ

ಪೋಗದಿರೆಲೊ ರಂಗ



ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ


ಭಾಗವತರು ಕಂಡರೆತ್ತಿಕೊಂಡೊಯ್ವರೊ

ಸುರಮುನಿಗಳು ತಮ್ಮ ಹೃದಯಗಹ್ವರದಲ್ಲಿ
ಪರಮಾತ್ಮನ ಕಾಣದರಸುವರೊ
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರೊ

ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿವರೊ ಗೋಪಾಲನೆ
ಮಗುಗಳ ಮಾಣಿಕ್ಯ ತಗುಲಿತು ಕರಕೆಂದು
ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೊ

ಧಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ಹಿಂದೆ ತಿರುಗುವರೊ
ಸೃಷ್ಟೀಶ ಪುರಂದರವಿಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೊ ರಂಗಯ್ಯ

ಇಂದಿನ ವಾರ ಶುಭವಾರ



ಇಂದಿನ ವಾರ ಶುಭವಾರ ಇಂದಿನ ದಿನ ಶುಭದಿನವು
ಇಂದಿನ ತಾರೆ ಶುಭತಾರೆ ಇಂದಿನ ಯೋಗ ಶುಭ ಯೋಗ
ಇಂದಿನ ಕರಣ ಶುಭಕರಣ ಇಂದಿನ ಲಗ್ನ ಶುಭಲಗ್ನ
ಇಂದು ಪುರಂದರವಿಠಲರಾಯನ ಪಾಡಿದ ದಿನವೆ ಶುಭದಿನವು

ಗುರುವಿನ ಗುಲಾಮನಾಗುವ ತನಕ

ಗುರುವಿನ ಗುಲಾಮನಾಗುವ ತನಕ
ದೊರಕದಣ್ಣ ಮುಕುತಿ



ಪರಿಪರಿಶಾಸ್ತ್ರವನೇಕವನೋದಿ
ವ್ಯರ್ಥವಾಯಿತು ಭಕುತಿ


ಆರು ಶಾಸ್ತ್ರವನೋದಿದರಿಲ್ಲ ಮೂ-
ರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ
ಧೀರನಾಗಿ ತಾ ಮೆರೆದರೆ ಇಲ್ಲ



ಕೊರಳೊಳು ಮಾಲೆಯ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಂತೆ ಶರೀರಕೆ ಬೂದಿಯ
ಒರಸಿಕೊಂಡು ತಾ ತಿರುಗಿದರಿಲ್ಲ




ನಾರಿಯ ಭೋಗ ಅಳಿಸಿದರಿಲ್ಲ
ಶರೀರಕೆ ಸುಖವ ಬಿಡಿಸಿದರಿಲ್ಲ
ನಾರದ ವರದ ಶ್ರೀ ಪುರಂದರವಿಠಲನ
ಮರೆಯದೆ ಮನದೊಳು ಬೆರೆಯುವ ತನಕ

ಆಚಾರವಿಲ್ಲದ ನಾಲಿಗೆ ನಿನ್ನ



ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಯ ಬಿಡು ನಾಲಿಗೆ


ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ
ಚಾಚಿಕೊಂಡಿರುವಂತ ನಾಲಿಗೆ


ಪ್ರಾತಃಕಾಲದೊಳೆದ್ದು ನಾಲಿಗೆ ಸಿರಿ-
ಪತಿಯೆನ್ನಬಾರದೆ ನಾಲಿಗೆ
ಪತಿತ ಪಾವನ ನಮ್ಮ ರತಿಪತಿ ಜನಕನ
ಸತತವು ನುಡಿ ಕಂಡ್ಯ ನಾಲಿಗೆ


ಚಾಡಿ ಹೇಳಲಿಬೇಡ ನಾಲಿಗೆ ನಿನ್ನ
ಬೇಡಿಕೊಂಬುವೆನು ನಾಲಿಗೆ
ರೂಢಿಗೊಡಯ ಶ್ರೀರಾಮನ ನಾಮವ
ಪಾಡುತಲಿರು ಕಂಡ್ಯ ನಾಲಿಗೆ


ಹರಿಯ ಸ್ಮರಣೆ ಮಾಡು ನಾಲಿಗೆ ನರ-
ಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರವಿಟ್ಠಲರಾಯನ
ಚರಣಕಮಲವ ನೆನೆ ನಾಲಿಗೆ

ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ



ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಿನ್ನಂಥ ದೊರೆಯೊಬ್ಬ ಎನಗುಂಟು ನಿನಗಿಲ್ಲ
ನೀನೆ ಪರದೇಶಿ ನಾನೆ ಸ್ವದೇಶಿ
ನಿನ್ನ ಅರಸಿ ಲಕ್ಷ್ಮಿ ಎನ್ನ ತಾಯಿಯುಂಟು
ನಿನ್ನ ತಾಯಿ ತೋರೋ ಪುರಂದರವಿಠಲ

ನಿಂದಕರಿರಬೇಕಿರಬೇಕು




ನಿಂದಕರಿರಬೇಕಿರಬೇಕು
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಂಗೆ


ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿದ ಪುಣ್ಯವನೊಯ್ಯುವರಯ್ಯ


ದುಷ್ಟಜನರು ಈ ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲ ಕೀರ್ತಿಗಳು
ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು
ಇಷ್ಟೇ ವರವನು ಬೇಡುವೆನಯ್ಯ


ದುರುಳ ಜನಂಗಳು ಚಿರಕಾಲವಿರುವಂತೆ
ಕರವ ಮುಗಿದು ವರವ ಬೇಡುವೆನು
ಪರಿಪರಿ ತಮಸಿಗೆ ಗುರಿಯಹರಲ್ಲದೆ
ಪರಮ ದಯಾನಿಧೆ ಪುರಂದರವಿಠಲ

ಜಗದುದ್ಧಾರನ ಆಡಿಸಿದಳೆಶೋದೆ



ಜಗದುದ್ಧಾರನ ಆಡಿಸಿದಳೆಶೋದೆ



ಜಗದುದ್ಧಾರನ ಮಗನೆಂದು ತಿಳಿಯುತ
ಸುಗುಣಾಂತರಂಗನ ಆಡಿಸಿದಳೆಶೋದೆ



ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನಾಡಿಸಿದಳೆಶೋದೆ



ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದಳೆಶೋದೆ



ಪರಮಪುರುಷನ ಪರವಾಸುದೇವನ
ಪುರಂದರವಿಠಲನ ಆಡಿಸಿಳೆಶೋದೆ

ಎನಗೂ ಆಣೆ ರಂಗ ನಿನಗೂ ಆಣೆ



ಎನಗೂ ಆಣೆ ರಂಗ ನಿನಗೂ ಆಣೆ
ಎನಗು ನಿನಗೂ ಇಬ್ಬರಿಗೂ ಭಕ್ತರಾಣೆ


ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ


ತನುಮನಧನದಲ್ಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸ್ಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ


ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ


ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ


ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು


ಉಂಬುಡುವುದಕ್ಕಿರುವ ಅರಸನೋಲಗಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು


ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ
ನಂಬಿ ಹರಿದಾಸರೊಳು ಪೊಂದಿ ಹಾಡುವುದೆ ಲೇಸು


ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿ ನೀರು ಕುಡಿದುಕೊಂಡಿಹುದೆ ಲೇಸು
ಬಿಡದೆ ಬಡಿದಾಡುವರ ನೆರೆಯಲಿಹುದಕ್ಕಿಂತ
ಅಡವಿಯೊಳಗಜ್ಞಾತವಾಸವೇ ಲೇಸು


ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಾದ ಹಾಳು ಗುಡಿಯೆ ಲೇಸು
ಬಿಸಜಾಕ್ಷ ಪುರಂದರವಿಟ್ಠಲನ ನೆನೆನೆನೆದು
ವಸುಧೆಯೊಳು ಚಿರಕಾಲವಿರುವುದೆ ಲೇಸು

ಕಲ್ಲುಸಕ್ಕರೆ ಕೊಳ್ಳಿರೋ


ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೋ


ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ


ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ


ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ


ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ

ಮಾನವ ಜನ್ಮ ದೊಡ್ಡದು - Manava janma doddadu



ಮಾನವ ಜನ್ಮ ದೊಡ್ಡದು ಇದ
ಹಾನಿ ಮಾಡಲಿಬೇಡಿ ಹುಚ್ಹಪ್ಪಗಳಿರಾ


ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಮೃತ
ಉಣ್ಣದೆ ಉಪವಾಸ ಇರುವರೆ ಖೋಡಿ


ಕಾಲನ ದೂತರು ಕಾಲ್ ಪಿಡಿದೆಳೆವಾಗ
ತಾಳು ತಾಳೆಂದರೆ ತಾಳುವರೆ
ದಾಳಿ ಬಾರದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲುಬೇಡಿ


ಏನು ಕಾರಣ ಯದುಪತಿಯನು ಮರೆತಿರಿ
ಧನ ಧಾನ್ಯ ಸತಿಸುತರು ಕಾಯುವರೆ
ಇನ್ನಾದರು ಏಕೋಭಾವದಿ ಭಜಿಸಿರೊ
ಚೆನ್ನ ಶ್ರೀ ಪುರಂದರವಿಟ್ಠಲರಾಯನ

ಶ್ರೀ ಪುರಂದರ ದಾಸರು - Shri Purandara dasaru


ಹರಿದಾಸರೇಣ್ಯರೆಂದು ಹೆಸರುವಾಸಿಯಾಗಿರುವ ಪುರಂದರದಾಸರ ಪೂರ್ವ ನಾಮ ಶ್ರೀನಿವಾಸನಾಯಕ. ಈತ ನವಕೋಟಿ ನಾರಾಯಣನೆನ್ನಿಸಿ ಅತ್ಯಂತ ಶ್ರೀಮಂತನಾಗಿದ್ದನು. ಈತನ ಹೆಂಡತಿಯ ಹೆಸರು ಸರಸ್ವತೀಬಾಯಿ.

ಶ್ರೀನಿವಾಸನಾಯಕರು ಆಗರ್ಭ ಶ್ರೀಮಂತರಾಗಿದ್ದರೂ ತುಂಬ ಜಿಪುಣರಾಗಿದ್ದರು. ಆತನ ಪತ್ನಿ ಸರಸ್ವತಿಬಾಯಿಯಾದರೋ ಪರಮ ದೈವಭಕ್ತಳು. ಶ್ರೀನಿವಾಸನಾಯಕರಿಗೆ ಜ್ನಾನೋದಯವನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಭಗವಂತನು ಬಡಬ್ರಾಹ್ಮಣನ ವೇಷವನ್ನು ಧರಿಸಿ ಒಬ್ಬ ಹುಡುಗನೊಂದಿಗೆ ಕೂಡಿ, ತನ್ನ ಮಗನಿಗೆ ಬ್ರಹ್ಮೋಪದೇಶವನ್ನು ಮಾಡಿಸುವ ಸಲುವಾಗಿ ಧನಸಹಾಯ ಮಾಡಬೇಕೆಂದು ಶ್ರೀನಿವಾಸನಾಯಕರಲ್ಲಿ ಬಂದು ಯಾಚಿಸಿದನು.

ಶ್ರೀನಿವಾಸನಾಯಕರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ, ಆ ಬ್ರಾಹ್ಮಣನನ್ನು ಹಲವಾರು ಬಾರಿ ಅಲೆದಾಡಿಸಿ ಕಡೆಗೆ ಒಂದು ಸವಕಲು ನಾಣ್ಯವನ್ನು ಕೊಟ್ಟರು. ಖಿನ್ನನಾದ ಬಡ ಬ್ರಾಹ್ಮಣನು ಸರಸ್ವತಿಬಾಯಿಯಲ್ಲಿಗೆ ಬಂದು ತನ್ನ ಮನೋಭಿಪ್ರಾಯವನ್ನು ತಿಳಿಸಿದನು. ಆಕೆಯ ಮನಸ್ಸು ಕರಗಿತು. ಮೊದಮೊದಲು ದಿಕ್ಕು ತೋಚದಂತಾಯಿತು. ಕಡೆಗೆ ತನ್ನ ತವರಿನವರು ತನಗೆ ಕೊಟ್ಟಿದ್ದ ಮುತ್ತಿನ ಮೂಗುತಿಯನ್ನು ಆ ಬ್ರಾಹ್ಮಣನಿಗೆ ಕೊಟ್ಟು ಕಳುಹಿಸಿದಳು. 

ವೇಶಧಾರಿಯಾದ ಆ ಬ್ರಾಹ್ಮಣನು ಆ ಒಡವೆಯನ್ನು ಅಡವಿಟ್ಟು ಹಣವನ್ನು ಪಡೆಯಲೆಂದು ಶ್ರೀನಿವಾಸರಲ್ಲಿಗೇ ಬಂದನು. ಕುಶಾಗ್ರಮತಿಯಾದ ಶ್ರೀನಿವಾಸನಾಯಕರು, ಆ ಒಡವೆ ಯಾರದಿರಬಹುದೆಂದು ಊಹಿಸಿ, ಒಡನೆಯೇ ಮನೆಗೆ ಬಂದು, ನಿಜವೃತ್ತಾಂತವನ್ನು ತಿಳಿದು, ಹೆಂಡತಿಯನ್ನು ದಂಡಿಸಿದರು.

ಆಕೆ ಅಸಹಾಯಕಳಾಗಿ ಪರಮಾತ್ಮನನ್ನು ಪ್ರಾರ್ಥಿಸಿದಳು. ಗಂಡನ ಆಗ್ರಹವನ್ನು ಎದುರಿಸಲಾಗದೆ, ತನ್ನ ಪ್ರಾಣವನ್ನೇ ತ್ಯಾಗಮಾಡಬೇಕೆಂದು ವಿಷವನ್ನು ಕುಡಿಯಲು ಬಟ್ಟಲನ್ನು ಮೇಲಕ್ಕೆ ಎತ್ತಿದಾಗ ಅದರಲ್ಲಿ ಆಕೆಯ ಮೂಗುತಿ ಬಿದ್ದಿದ್ದು ಗೋಚರಿಸಿತು. ಈ ಸೋಜಿಗವನ್ನು ಮನಗಂಡ ಶ್ರೀನಿವಾಸನಾಯಕರಿಗೆ ತಮ್ಮ ಅಜ್ಞಾನ ಸರಿದು, ಬಂದಾತ ಭಗವಂತನಿರಬೇಕೆಂದು ಧೃಡವಾಯಿತು. ಆ ಕ್ಷಣವೇ ತಮ್ಮ ಆಸ್ತಿ ಪಾಸ್ತಿಗಳೆನ್ನೆಲ್ಲ ಶ್ರಿಷ್ಣಾರ್ಪಣವೆಂದು ದೇವರಿಗೆ ಸಲ್ಲಿಸಿ ವಿರಕ್ತರಾದರು.

 "ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು" ಎಂದು ಹಿಗ್ಗಿ ಹಾಡುತ್ತಾ ತಮಗೆ ಜ್ಞಾನೋದಯವನ್ನು ಉಂಟು ಮಾಡಿದ ತಮ್ಮ ಹೆಂಡತಿಯನ್ನು ಮುಕ್ತ ಕಂಠದಿಂದ ಕೊಂಡಾಡಿದರು. ಅನಂತರ ಶ್ರೀವ್ಯಾಸರಾಯರಲ್ಲಿಗೆ ಹೋಗಿ "ಪುರಂದರ ವಿಠಲ" ಎಂಬ ಅಂಕಿತವನ್ನು ಪಡೆದು ತಮ್ಮ ಕೀರ್ತನ ಕೈಂಕರ್ಯವನ್ನು ಅತ್ಯಂತ ಉಜ್ವಲವಾಗಿ ನೆರವೇರಿದರು.

ಶ್ರೀಪುರಂದರದಾಸರು ಸಾಧಿಸಿದ ಮಹಾತ್ಕಾರವನ್ನು ಮೆಚ್ಹಿಕೊಂಡು ಶ್ರೀವ್ಯಾಸರಾಯರು ಅವರನ್ನು "ದಾಸರೆಂದರೆ ಪುರಂದರದಾಸರಯ್ಯ" ಎಂದು ಪ್ರಶಂಸಿಸಿದಷ್ಟೇ ಅಲ್ಲದೆ ಅವರ ರಚನೆಗಳನ್ನು "ಪುರಂದರೋಪನಿಷತ್ತು" ಎಂದು ಗೌರವಿಸಿರರು.

ಶ್ರೀ ಪುರಂದರದಾಸರು ೪,೭೫,೦೦೦ ಕೃತಿಗಳನ್ನು ರಚಿಸಿದರೆಂದು ತಿಳಿದು ಬರುತ್ತದೆ. ಈಗ ಉಪಲಬ್ಧವಾಗಿರುವ ಅವರ ಕೀರ್ತನೆಗಳ ಸಮುದಾಯವನ್ನು ಸಮೀಕ್ಷಿಸಿದರೆ ಅವರ ಪ್ರಾಸಾದಿಕವಾಣಿಯ ವೈಭವವು ಸ್ವವಿವಿದಿತವಾಗುತ್ತದೆ. ಅವರ ಕೃತಿಗಳಲ್ಲಿ ಸಾಹಿತ್ಯ, ಸಂಗೀತ ಮತ್ತು ಸ್ವಧರ್ಮ ನಿಷ್ಠೆಗಳ ತ್ರಿವೇಣಿ ಸಂಗಮವನ್ನು ಕಾಣಬಹುದು. ಅವರನ್ನು 'ಕರ್ಣಾಟಕ ಸಂಗೀತ ಪಿತಾಮಹ' ಎಂದು ಎಲ್ಲರೂ ಮನ್ನಿಸುವುದುಂಟು. ಸಮಗ್ರ ಹರಿದಾಸ ಸಾಹಿತ್ಯ ಪ್ರಪಂಚದ ಪ್ರತಿನಿಧಿಯಂತಿರುವ ಪುರಂದರದಾಸರನ್ನು "ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ" ಎಂದು ಹೊಗಳುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪುರಂದರದಾಸರು ನಾರದರೆಂದು ಸುಪ್ರಸಿದ್ಧವಾಗಿರುವುದರಿಂದ ಅವರು ಭಕ್ತಿ ಸಂಪನ್ನರು, ಗಾನ ಲೋಲರು.