ಇಂದು ನಾನೇನು ಸುಕೃತವ ಮಾಡಿದೆನೋ

ಇಂದು ನಾನೇನು ಸುಕೃತವ ಮಾಡಿದೆನೋ
ಮಂಗಳ ಮಹಿಮ ವೇಂಕಟ ಬಂದ ಮನೆಗೆ


ಹಾರಕೇಯೂರ ಹೊನ್ನುಂಗುರ ಬೆರಳು
ಹಾರದ ನಡುವೆ ಹಾಕಿದವೇಳು ಪದಕ
ತೋರಮುತ್ತಿನ ಕಂಠಮಾಲೆ ಸರಿಗೆಯು ಕೋ-
ನೇರಿವಾಸ ವೇಂಕಟ ಬಂದ ಮನೆಗೆ


ಕಾಲಪೆಂಡಿಗೆಯು ರಕ್ಕಸರ ಹಾವಿಗೆಯು
ಮೇಲಾದ ವಜ್ರನವರತ್ನದ ಮಕುಟ
ವೀಳ್ಯದ ಬಾಯಿ ಕರ್ಪೂರದ ಕರಡಿಗೆಯು
ಮೇಲುಗಿರಿವಾಸ ವೇಂಕಟ ಬಂದ ಮನೆಗೆ


ಬಿಗಿದು ಸುತ್ತಿದ ವಲ್ಲಿ ಬಿಡಿಮುತ್ತಿನ ಕಂಠಿ
ಬಿಗಿ ಮುಗುಳುನಗೆ ದಂತ ಎಸೆವಂಥ ಪಙ್ತೆ
ತೆಗೆದುಟ್ಟ ಪೀತಾಂಬರ ಉಡುಗೆ ಕಠಾರಿ
ಯದುಗಿರಿವಾಸ ವೇಂಕಟ ಬಂದ ಮನೆಗೆ


ನೊಸಲ ಸುತ್ತಿದ ಪಟ್ಟೆ ಎಸೆವೊ ಕಸ್ತುರಿಯು
ವಶವಾದ ಅಮೃತದ ರಸ ಸವಿಮಾತು
ಎಸಳುಕಂಗಳ ನೋಟ ಹೊಸ ಪಂಚಬಾಣ
ಸುಕುಮಾರ ಸೊಬಗು ವೇಂಕಟ ಬಂದ ಮನೆಗೆ


ಕಲಿಯುಗದಲಿ ಶಂಖಚಕ್ರವ ಧರಿಸಿ
ಹದಿನಾಲ್ಕುಲೋಕ ತನ್ನುದರದಲ್ಲಿಟ್ಟು
ಗರುಡನ ಏರಿ ಮೂರ್ಜಗವ ಮೋಹಿಸುವ
ಪುರಂದರವಿಠಲ ವೇಂಕಟ ಬಂದ ಮನೆಗೆ

ನಾನೇಕೆ ಬಡವನೊ ನಾನೇಕೆ ಪರದೇಶಿ


ನಾನೇಕೆ ಬಡವನೊ ನಾನೇಕೆ ಪರದೇಶಿ
ಶ್ರೀನಿಧೇ ಹರಿ ಎನಗೆ ನೀನಿರುವ ತನಕ

ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ
ಇಷ್ಟ ಬಂಧು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ

ಒಡಹುಟ್ಟಿದವ ನೀನೆ ಒಡಲಹೊರೆವವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವವ ನೀನೆ
ಮಡದಿ ಮಕ್ಕಳನೆಲ್ಲ ಕಡೆಹಾಯಿಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವತನಕ

ವಿದ್ಯೆ ಹೇಳುವವ ನೀನೆ ಬುದ್ಧಿ ಕಲಿಸುವವ ನೀನೆ
ಉದ್ಧಾರಕರ್ತ ಮಮಸ್ವಾಮಿ ನೀನೆ
ಮುದ್ದು ಶ್ರೀ ಪುರಂದರವಿಠಲ ನಿನ್ನಡಿಮೇಲೆ
ಬಿದ್ದು ಕೊಂಡಿರುವತನಕ ಏತರ ಭಯವೊ

ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ


ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ
ಶ್ರೀರಾಮನಾಮ ಧ್ವನಿಗೆ

ಕಣಕಾಲಂದುಗೆ ಗೆಜ್ಜೆ ಝಣ ಝಣರೆನುತ
ಝಣಕು ಝಣಕುರೆಂದು ಕುಣಿ ಕುಣಿದಾಡುತ

ತುಂಬುರು ನಾರದ ವೀಣೆಯ ಬಾರಿಸುತ
ವೀಣೆ ಬಾರಿಸುತ ಶೀರಾಮನಾಮ ಪಾಡುತ ಕುಣಿದಾಡುತ

ಪುರಂದರವಿಠಲನ ನೆನೆದು ಪಾಡುತಲಿ ನೆನೆದು ಪಾಡುತಲಿ
ಆಲಿಂಗನ ಮಾಡುತಲಿ

ಲಾಲಿಸಿದಳು ಮಗನ ಯಶೋದೆ


ಲಾಲಿಸಿದಳು ಮಗನ ಯಶೋದೆ ಲಾಲಿಸಿದಳು ಮಗನ

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ

ಬಾಲಕನೆ ಕೆನೆ ಹಾಲು ಮೊಸರನೀವೆ
ಲೀಲೆಯಿಂದಲಿ ಎನ್ನ ತೋಳ ಮೇಲ್ಮಲಗೆಂದು

ಮುಗುಳು ನಗೆಯಿಂದ ಮುದ್ದು ತಾ ತಾರೆಂದು
ಜಗದೊಡೆಯನ ಶ್ರೀ ಪುರಂದರವಿಠಲನ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ


ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ

ವಾಗಭಿಮಾನಿ ವರ ಬ್ರಹ್ಮಾಣಿ
ಸುಂದರವೇಣಿ ಸುಚರಿತ್ರಾಣಿ

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರಸೊಸೆಯ

ವೃಂದಾವನದೊಳಗಾಡುವನ್ಯಾರೆ

ವೃಂದಾವನದೊಳಗಾಡುವನ್ಯಾರೆ ಗೋಪಿ
ಚಂದಿರವದನೆ ನೋಡುವ ಬಾರೆ

ಅರುಣಪಲ್ಲವ ಪಾದಯುಗಳನೆ ದಿವ್ಯ
ಮರಕತ ಮಂಜುಳಾಭರಣನೆ
ಸಿರಿವರ ಯದುಕುಲ ಸೋಮನೆ ಇಂಥ
ಪರಿಪೂರ್ಣ ಕಾಮ ನಿಸ್ಸೀಮನೆ

ಹಾರಹೀರ ಗುಣಧಾರನೆ ದಿವ್ಯ
ಸಾರ ಶರೀರ ಶೃಂಗಾರನೆ
ಆರಿಗಾದರು ಮನದೂರನೆ ತನ್ನ
ಸೇರಿದವರ ಮಾತ ಮೀರನೆ

ಮಕರಕುಂಡಲ ಕಾಂತಿಭರಿತನೆ ದಿವ್ಯ
ಅಕಳಂಕ ರೂಪ ಲಾವಣ್ಯನೆ
ಸಕಲರೊಳಗೆ ದೇವನೀತನೆ ನಮ್ಮ
ಮುಕುತೀಶ ಪುರಂದರವಿಠಲನೆ

ರಾಮ ಎಂಬೊ ಎರಡಕ್ಷರದ ಮಹಿಮೆಯನು

ರಾಮ ಎಂಬೊ ಎರಡಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ



ರಾ ಎಂದ ಮಾತ್ರದೊಳು ರಕ್ತಮಾಂಸದೊಳಿದ್ದ
ಆಯಸ್ತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ



ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳಪೋಗದಂತೆ ಕವಾಟವಾಗಿ
ಚಿತ್ತಕಾಯಗಳ ಪವಿತ್ರಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ



ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಪುರಂದರವಿಟ್ಠಲನ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ

ಯಾರಿಗೆ ಯಾರುಂಟು ಎರವಿನ ಸಂಸಾರ

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ

ಬಾಯಾರಿತು ಎಂದು ಬಾವಿನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ

ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ

ಅಡವಿಯೊಳ್ಮನೆಮಾಡಿ ಗಿಡಕೆ ತೊಟ್ಟಿಲು ಕಟ್ಟಿ
ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ

ತಂದೆ ಶ್ರೀ ಪುರಂದರವಿಠಲ ನಾರಾಯಣ
ನಾ ಸಾಯೊ ಹೊತ್ತಿಗೆ ನೀ ಕಾಯೊ ಹರಿಯೆ

ನಾ ಮಾಡಿದ ಕರ್ಮ ಬಲವಂತವಾದರೆ

ನಾ ಮಾಡಿದ ಕರ್ಮ ಬಲವಂತವಾದರೆ
ನೀ ಮಾಡುವದೇನೊ ದೇವ


ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ
ನೇಮದಿಂದಲಿ ಎನ್ನ ಹಣಿಯಲಲ್ಲಿ ಬರೆದುದಕೆ


ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ
ಸ್ನಾನ ಸಂಧ್ಯಾನ ಜಪತಪ ನೀಗಿ
ದಾನವಂತಕ ನಿನ್ನ ಧ್ಯಾನವ ಮಾಡದೆ
ಶ್ವಾನನಂತೆ ಮನೆಮನೆಯ ತಿರುಗುತಲಿದ್ದೆ


ಅತಿಥಿಗಲಿಗೆ ಅನ್ನ ಕೊಟ್ಟವನಲ್ಲ ಪರ-
ಸತಿಯರ ಸಂಗ ಅರಘಳಿಗೆ ಬಿಟ್ಟವನಲ್ಲ
ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ
ಗತಿ ಯಾವುದೆನಗಿನ್ನು ಗರುಡುಗಮನ ಕೃಷ್ಣ


ಇನ್ನಾದರು ನಿನ್ನ ದಾಸರ ಸಂಗವಿತ್ತು
ಮನ್ನಿಸಿ ಸಲಹಯ್ಯ ಮನ್ಮಥಜನಕ
ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ
ಪನ್ನಂಗಶಯನ ಶ್ರೀ ಪ್ರುರಂದರವಿಠಲ

ನಾ ನಿನಗೇನ ಬೇಡುವದಿಲ್ಲ

ನಾ ನಿನಗೇನ ಬೇಡುವದಿಲ್ಲ
ಎನ್ನ ಹೃದಯಕಮಲದೊಳು ನೆಲಸಿರು ಹರಿಯೆ


ಶಿರ ನಿನ್ನ ಚರಣಕೆರಗಲಿ ಚಕ್ಷು
ಎರಕದಿಂದಲಿ ನಿನ್ನ ನೋಡಲಿ ಹರಿಯೆ
ನಿರುಮಾಲ್ಯ ನಾಸ ಘ್ರಾಣಿಸಲಿ ಎನ್ನ
ಕರಣ ಗೀತಂಗಳ ಕೇಳಲಿ ಹರಿಯೆ


ನಾಲಗೆ ನಿನ್ನ ಕೊಂಡಾದಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ
ಕಾಲು ತೀರ್ಥಯಾತ್ರೆಗೆ ಪೋಗಲಿ ಮನ
ಓಲೈಸಿ ನಿನ್ನನು ಸ್ಮರಿಸಲಿ ಹರಿಯೆ


ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ
ಭಕ್ತಜನರ ಸಂಗ ದೊರಕಲಿ ಹರಿಯೆ
ತತ್ತ್ವಯೋಗಭ್ಯಾಸಕ್ಕಾಗಲಿ ಉಕ್ತಿ
ಸತ್ಯಮೂರುತಿ ನಮ್ಮ ಪುರಂದರವಿಠಲ

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ


ಅಂಬುಜನಾಭನ ಅಖಿಳ ಲೋಕೇಶನ
ಅಪ್ರಮೇಯನಾದ ಆದಿಪುರುಷನ


ಪಿತನ ತೊಡೆಯ ಮೇಲೆ ಧ್ರುವರಾಯ
ಹಿತದಿಂದ ಕುಳಿತಿರಲು
ಮತಿಹೀನಳಾದ ಸುರುಚಿದೇವಿ ನೂಕಲು
ಹಿತದಿ ಧ್ರುವಗೆ ಪಟ್ಟ ಕೊಟ್ಟ ಮುರಾರಿಯ


ವರ ಪ್ರಹ್ಲಾದನ ಪಿತನು ಬಾಧಿಸುತಿರೆ
ಹರಿ ನೀನೆ ಗತಿಯೆನಲು
ಪರಮ ಪ್ರೀತಿಯಿಂದ ತರಳನ ಪಾಲಿಸಿ
ದುರುಳ ಹಿರಣ್ಯಕಶ್ಯಪನ ಸೀಳಿದ ಧೊರೆಯ


ಕರಿರಾಜನ ಸಲಹಿ ಅಂಜದಿರೆಂದು ಅ-
ದರಿಸಿದವರು ಯಾರೋ
ಗರುಡಗಮನ ಶ್ರೀ ಪುರಂದರವಿಠಲನ
ಚರಣಕಮಲವನ್ನು ದೃಢದಿಂದ ನಂಬಿರೊ

ನಗೆಯು ಬರುತಿದೆ ಎನಗೆ

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ

ಜಗದೊಳಿರುವ ಜಾಣರೆಲ್ಲ ಹಗರಣ ಮಾಡುವುದನೆ ಕಂಡು

ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರೊಳಗೆ ಮುಳುಗಿ
ಬೆರಳನೆಣಿಸುತಿಹರ ಕಂಡು


ಪತಿಯ ಸೇವೆ ಬಿಟ್ಟಿ ಪರ
ಪತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು


ಹೀನ ಗುಣದ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಮೌನಿ ಪುರಂದರವಿಠಲನ್ನ
ಧ್ಯಾನ ಮಾಡುವವನ ಕಂಡು

ಧನವ ಗಳಿಸಬೇಕಿಂತಹುದು

ಧನವ ಗಳಿಸಬೇಕಿಂತಹುದು ಈ
ಜನರಿಗೆ ಕಾಣಿಸದಂತಹುದು


ಕೊಟ್ಟರೆ ತೀರದಂತಹುದು ತನ್ನ
ಬಿಟ್ಟು ಅಗಲಿ ಇರದಂತಹುದು
ಕಟ್ಟಿದ ಗಂಟನು ಬಯಲೊಳಗಿಟ್ಟರೆ
ಮುಟ್ಟರು ಆರೂ ಅಂತಹುದು


ಕರ್ಮವನೋಡಿಸುವಂತಹುದು
ಧರ್ಮವ ಮಾಡಿಸುವಂತಹುದು
ನಿರ್ಮಲವಾಗಿಸಿ ಮನಸಿನೊಳಗೆ ನಿಜ
ಧರ್ಮವ ತೋರಿಸುವಂತಹದು


ಅಜ್ಞಾನವು ಬಾರದಂತಹದು ನಿಜ
ಸುಜ್ಞಾನವ ತೋರುವಂತಹದು
ವಿಜ್ಞಾನಮೂರುತಿ ಪುರಂದರವಿಠಲನ
ಪ್ರಜ್ಞೆಯನ್ನು ಕೊಡುವಂತಹುದು

ಶರಣು ಸಿದ್ದಿ ವಿನಾಯಕ

ಶರಣು ಸಿದ್ದಿ ವಿನಾಯಕ
ಶರಣು ವಿದ್ಯಾ ಪ್ರದಾಯಕ


ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಕವಾಹನ


ನಿಟಿಲನೇತ್ರನ ದೇವಿ ಸುತನೆ
ನಾಗಭೂಷಣ ಪ್ರೀಯನೆ
ಕಟಿಕಟಾಂಗದ ಕೋಮಲಾಂಗನೆ


ಕರ್ಣಕುಂಡಲಧಾರನೆ
ಬಟುವ ಮುತ್ತಿನಹಾರ ಪದಕನೆ
ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯು ಹೇಮಕಂಕಣ


ಪಾಶದಂಕುಶಧಾರನೆ
ಕೂಕ್ಷಿ ಮಹಾಲಂಬೋದರನೆ
ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನನಾದ ಪುರಂದರವಿಠಲನ ನಿಜದಾಸನೆ

ಭಾಗ್ಯದ ಲಕ್ಷ್ಮಿ ಬಾರಮ್ಮ

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮಾ ಶ್ರೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ

ಗೆಜ್ಜೆ ಕಾಲ್‌ಗಳ ಧ್ವನಿಯ ತೋರುತ
ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕ ವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೊರೆ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ

ಶಂಕೆ ಇಲ್ಲದ ಭಾಗ್ಯವ ಕೊಡಲು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ
ವೆಂಕಟರಮಣನ ಬಿಂಕದ ರಾಣಿ

ಅತ್ತಿತ್ತಗಲದೆ ಭಕ್ತರ ಮನೆಯೊಳು
ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯದಿ ತೋರುತ ಸಾಧು ಸಜ್ಜನರಾ
ಚಿತ್ತದಿ ಹೊಳೆಯುವ ಪುತ್ತಳಿ ಗೊಂಬೆ

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಆಳಗಿರಿ ರಂಗನ
ಚೊಕ್ಕ ಪುರಂದರವಿಠಲನ ರಾಣಿ

ಅನುಭವದಡುಗೆಯ ಮಾಡಿ

ಅನುಭವದಡುಗೆಯ ಮಾಡಿ ಅದ-
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ


ತನುವೆಂಬ ಬಾಂಢವ ತೊಳೆದು ಕೆಟ್ಟ
ಮನದ ಚಂಚಲವೆಂಬ ಮುಸುರೆಯ ಕಳೆದು
ಘನವಾಗಿ ಮನೆಯನ್ನು ಬಳಿದು ಅಲ್ಲಿ
ಮಿನುಗುವ ತ್ರಿಗುಣದ ಒಲೆಗುಂಡುನೆಡೆದು


ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣ
ಹರಿಭಕ್ತಿಯೆಂಬ ನೀರನ್ನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ
ಮರೆವೆಂಬ ಕಾಷ್ಠವ ಮುದದಿಂದ ಸುಟ್ಟು


ಶರಣೆಂಬೊ ಸಾಮಗ್ರಿ ಹೂಡಿ ಮೋಕ್ಷ
ಪರಿಕರವಾದಂಥ ಪಾಕವ ಮಾಡಿ
ಗುರು ಶರಣರು ಸವಿದಾಡಿ ನಮ್ಮ ಪುರಂ-
ದರವಿಠಲನ ಬಿಡದೆ ಕೊಂಡಡಿ

ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ

ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ

ಕದ ಬಾಗಿಲಿರಿಸಿಹ ಕಳ್ಳ ಮನೆ ಇದು
ಮುದಿದಿಂದಲೋಲ್ಯಾಡೊ ಸುಳ್ಳು ಮನೆ
ಇದಿರಾಗಿ ವೈಕುಂಠ ವಾಸ ಮಾಡುವಂಥ
ಪದುಮನಾಭನ ದಿವ್ಯ ಬದುಕು ಮನೆ


ಮಾಳಿಗೆ ಮನೆಯೆಂದು ನೆಚ್ಚಿ ಕೆಡಲುಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮದೂತರು ಬಂದೆಳೆದೊಯ್ದಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ


ಮಡದಿ ಮಕ್ಕಳೆಂಬ ಹಂಬಲ ನಿನಗೇಕೊ
ಕಡು ಗೊಬ್ಬುತನದಲಿ ನಡೆಯದಿರು
ಒಡೆಯ ಶ್ರೀ ಪುರಂದರವಿಠಲನ ಚರಣವ
ದೃಢ ಭಕ್ತಿಯಲಿ ನೀ ಭಜಿಸಿಕೊ ಮನುಜ

ಆದದ್ದೆಲ್ಲ ಒಳಿತೇ ಆಯಿತು

ಆದದ್ದೆಲ್ಲ ಒಳಿತೇ ಆಯಿತು ನಮ್ಮ

ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ


ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
ಭೂಪತಿಯೆಂದು ಗರ್ವಿಸುತ್ತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ


ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಪುರಂದರವಿಠಲನು
ತುಳಸೀಮಾಲೆ ಹಾಕಿಸಿದನು

ಆರು ಹಿತವರು ನಿನಗೆ ಮೂರು ಮಂದಿಯೊಳಗೆ

ಆರು ಹಿತವರು ನಿನಗೆ ಮೂರು ಮಂದಿಯೊಳಗೆ

ನಾರಿಯೋ ಧಾರುಣಿಯೋ ಬಲು ಧನದ ಸಿರಿಯೋ

ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿ ಎನಿಸಿ
ಬಿನ್ನವಿಲ್ಲದೆ ಅರ್ಧದೇಹವೆನಿಸಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ

ಮುನ್ನ ಶತಕೋಟಿ ರಾಯರುಗಳಾಳಿದ ನೆಲನ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನು ಅಸುವಳಿಯೆ ಹೊರಗೆ ಹಾಕುವರು

ಉದ್ಯೋಗ ವ್ಯವಹಾರ ನೃಪಸೇವೆ ಕುಶಲಗತಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ಧಿಯಿಂದಲಿ ಗಳಿಸಿ ಇಟ್ಟಿದ್ದ ಅರ್ಥವನು
ಸದ್ಯದಲಿ ಆರುಂಬುವರು ಪೇಳೊ ಮನುಜ

ಶೋಕವನು ಗೈಯುವರು ಸತಿಸುತರು ಬಾಂಧವರು
ಜೋಕೆ ತಪ್ಪಿದ ಬಳಿಕ ಅರ್ಥ ವ್ಯರ್ಥ
ಲೋಕದೊಳು ಗಳಿಸಿರ್ದ ಪುಣ್ಯಪಾಪಗಳೆರಡು
ಸಾಕಾರವಾಗಿ ಸಂಗಡ ಬಾಹೊವಲ್ಲದೆ

ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡ
ಸ್ವಸ್ಥದಲಿ ನೆನೆ ಕಂಡ್ಯ ಪರಮಾತ್ಮನ
ಚಿತ್ತದೊಳು ಶುದ್ಧಿಯಿಂ ಪುರಂದರವಿಠಲನೆ
ಉತ್ತಮೋತ್ತಮನೆಂದು ಸುಖಿಯಾಗೊ ಮನುಜ

ಇನ್ನೂ ದಯೆ ಬಾರದೆ ದಾಸನ ಮೇಲೆ


ಇನ್ನೂ ದಯೆ ಬಾರದೆ ದಾಸನ ಮೇಲೆ

ಪನ್ನಂಗಶಯನ ಪಾಲ್ಗಡಲೊಡೆಯನೆ ರಂಗ

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನ್ನ ಯೋನಿಗಳಲ್ಲಿ ಅಳಿದು ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೇ ಗತಿಯೆಂದು ನಂಬಿದ ದಾಸನ ಮೇಲೆ


ಕಾಮಾದಿ ಷಡ್ವರ್ಗ ಗಾಢಾಂಧಕಾರದಿ
ಪಾಮರನಾಗಿದ್ದ ಪಾತಕನು
ಶ್ರೀಮನೋಹರನೆ ಚಿತ್ತಜ ಜನಕನೆ
ನಾಮಮುದ್ರಿಕೆಯಿಂದ ನಂಬಿದ ದಾಸನ ಮೇಲೆ


ಮಾನಸ-ವಾಚ-ಕಾಯದಿ ಮಾಳ್ಪ ಕರ್ಮವು
ದಾನವಾಂತಕ ನಿನ್ನಾಧೀನವಲ್ಲವೆ
ಏನು ಮಾಡಿದರೇನು ಪ್ರಾಣ ನಿನ್ನದು ದೇವ
ಶ್ರೀನಾಥ ಪುರಂದರವಿಠಲ ದಾಸನ ಮೇಲೆ

ಈ ಪರಿಯ ಸೊಬಗಾವ ದೇವರಲಿ ಕಾಣಿ

ಈ ಪರಿಯ ಸೊಬಗಾವ ದೇವರಲಿ ಕಾಣಿ
ಗೋಪೀಜನಪ್ರಿಯ ಗೋಪಾಲಗಲ್ಲದೆ


ಧೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜನದಾದಿ ಗುರುವು


ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವ ದೈರ್ಯದಿ ನೋಡೆ ಅಸುರಾಂತಕ


ಗಗನದಲಿ ಸಂಚರಿಪ ಗರುಡ ತುರಗ
ಜಗತೀಧರ ಶೇಷ ಪರಿಯಂಕ ಶಯನ
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ

ದೇವ ಬಂದ ನಮ್ಮ ಸ್ವಾಮಿ ಬಂದನೊ

ದೇವ ಬಂದ ನಮ್ಮ ಸ್ವಾಮಿ ಬಂದನೊ
ದೇವರ ದೇವ ಶಿಖಾಮಣಿ ಬಂದನೊ


ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ


ಮಂದರೋದ್ದರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೊ


ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದನೊ


ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯ ಫಲದ ಶ್ರೀ ಲಕ್ಷ್ಮೀರಮಣ ಬಂದನೊ


ನಿಗಮಗೋಚರ ಬಂದ ನಿತ್ಯತೃಪ್ತನು ಬಂದ
ನಗೆಮುಖ ಪುರಂದರವಿಠಲ ಬಂದನೊ

ಪಿಳ್ಳಂಗೋವಿಯ ಚೆಲ್ವ ಕೃಷ್ಣನ

ಪಿಳ್ಳಂಗೋವಿಯ ಚೆಲ್ವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ


ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು

ನಂದಗೋಪನ ಮಂದಿರಂಗಳ ಸಂದುಗೊಂದಿನಲಿ
ಚೆಂದ ಚೆಂದದ ಗೋಪಬಾಲರ ವೃಂದವೃಂದದಲಿ
ಸುಂದಾರಾಂಗದೆ ಸುಂದರಿಯರ ಹಿಂದುಮುಂದಿನಲಿ
ಅಂದದಾಕಳ ಕಂದಕರುಗಳ ಮಂದೆ ಮಂದೆಯಲಿ

ಶ್ರೀಗುರೂಕ್ತ ಸದಾ ಸುಮಂಗಳ ಯೋಗ ಯೋಗದಲಿ
ಆಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಾಡುವ ರಾಗ ರಾಗದಲಿ

ಈ ಚರಾಚರದೊಳಗೆ ಜನಂಗಳಾಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಡದ ಪುರಂದರವಿಠಲನ ಲೋಚನಾಗ್ರಹದಲಿ

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ


ಇಂದಿರೆ ರಮಣನ ಧ್ಯಾನವ ಮಾಡಲು
ಬಂದ ದುರಿತ ಬಯಲಾದುದಿಲ್ಲವೆ


ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ
ಘೋರ ದುರಿತ ಬಯಲಾದುದಿಲ್ಲವೆ?


ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ
ಶ್ರೀರಮಣನ ಸಿರಿ ಚರಣ ಶರಣರಿಗೆ
ಕ್ರೂರ ಯಮನು ಶರಣಾಗಲಿಲ್ಲವೆ?


ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ
ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ
ಮಂಗಳ ಮಹಿಮ ಪುರಂದರವಿಠಲ ಶು-
ಭಾಂಗನ ದಯವೊಂದಿದ್ದರೆ ಸಾಲದೆ

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ


ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ

ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ

ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನ ಸಜ್ಜಿಗೆ ತೆಗೆದು ಸಣ್ಣ ಸೇವೆಗೆ ಹೊಸೆದು

ಹೃದಯವೆಂಬೊ ಪಾತ್ರೆಯೊಳಗೆ ಭಾವವೆಂಬೊ ಎಸರು ಇಟ್ಟು
ಬುದ್ದಿಯಿಂದ ಪಕ್ವವ ಮಾಡಿ ಹರಿವಾಣದೊಳಗೆ ನೀಡಿ

ಆನಂದ ಆನಂದವೆಂಬೊ ತೇಗು ಬಂದ ಪರಿಯಲಿ
ಆನಂದಮೂರುತಿ ನಮ್ಮ ಪುರಂದರವಿಠಲ ನೆನೆಯಿರೊ

ಕಂಡೆ ನಾ ಗೋವಿಂದನ

ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ



ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯ್ತುತಾನಂತನ
ಸಾಸಿರನಾಮನ ಶ್ರೀ ಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ



ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲ ಜನ ಮುನಿವಂದ್ಯನ
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ



ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತ ವಜ್ರಪಂಜರನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆ ಬೇಲೂರ ಕೇಶವನ

ಕಂಡು ಕಂಡು ನೀ ಎನ್ನ ಕೈ ಬಿಡುವರೇ

ಕಂಡು ಕಂಡು ನೀ ಎನ್ನ ಕೈ ಬಿಡುವರೇ
ಪುಂಡರೀಕಾಕ್ಷ ಪುರುಷೋತ್ತಮ ಹರೇ


ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ


ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ನೊಂದೆ ನಾನು
ಸನಕಾದಿಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದವರದ ಶ್ರೀಕೃಷ್ಣಾ


ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ
ಭಕ್ತರಾಧೀನನಾಗಿರಬೇಡವೆ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ

ಆಡಿದನೊ ರಂಗ ಅದ್ಭುತದಿಂದಲಿ

ಆಡಿದನೊ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ

ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯಮಾಡುತಲಿ ನಲಿ-
ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ

ಅಂಬುರುಹೋದ್ಭವ ಅಖಿಲ ಸುರರು ಕೂಡಿ
ಅಂಬರದಲಿ ನಿಂತವರು ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು
ಚಂದದಿಂ ಭರತನಾಟ್ಯವ ನಟಿಸೆ
ಝಂತಟ ತಕಧಿಮಿ ತಧಿಗಣಿ ತೋಂ ಎಂದು

ಝಂಪೆತಾಳದಿ ತುಂಬುರನೊಪ್ಪಿಸೆ
ಧಾಮಪಪದಸರೀ ಎಂದು ಧ್ವನಿಯಿಂದ
ನಾರದ ತುಂಬುರರ್ಗಾನವ ಮಾಡಲು
ನಂದಿಯು ಚಂದದಿ ಮದ್ದಲೆ ಹಾಕಲು

ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು
ಘಣಘಣಿಸುತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ ಮುಖದೊಳು
ಚಲಿಸುವ ನೀಲಕೇಶಗಳಾಡೆ
ಕಾಲಲಂದಿಗೆ ಗೆಜ್ಜೆ ಘಲು ಘಲು
ಘಲುರೆನುತ ಉಡುಗೆಜ್ಜೆ ಘಂಟೆಗಳಾಡೆ

ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟ ಪಾದವ ಇಟ್ಟು ಶ್ರೀಕೃಷ್ಣನು
ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು

ಸುರರು ಪುಷ್ಪದ ವೃಷ್ಟಿಯ ಕರೆಯಲು
ಸುದತಿಯರೆಲ್ಲರು ಪಾಡಲು
ನಾಗಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು
ದಿಕ್ಕು ದಿಕ್ಕುಗಳಿಗೆ ಓಡಲು

ಚಿಕ್ಕವನಿವನಲ್ಲ ಪುರಂದರವಿಠಲ
ವೆಂಕಟರಮಣನ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ

ಗುಮ್ಮನ ಕರೆಯದಿರೆ ಅಮ್ಮ ನೀನು


ಗುಮ್ಮನ ಕರೆಯದಿರೆ ಅಮ್ಮ ನೀನು

ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ


ಹೆಣ್ಣುಗಳಿರುವಲ್ಲಿ ಪೋಗಿ ಅವರ
ಕಣ್ಣು ಮುಚ್ಚುವದಿಲ್ಲವೆ
ಚಿಣ್ಣರ ಬಡಿಯೆನು, ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ


ಬಾವಿಗೆ ಪೋಗೆ ಕಾಣೆ ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಲಿ ಕೂಡುವೆ

ಮಗನ ಮಾತ ಕೇಳಿ ಗೋಪಿದೇವಿ
ಮುಗುಳು ನಗೆ ನಗುತ
ಜಗದೊಡೆಯನ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ

ಪೋಗದಿರೆಲೊ ರಂಗ



ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ


ಭಾಗವತರು ಕಂಡರೆತ್ತಿಕೊಂಡೊಯ್ವರೊ

ಸುರಮುನಿಗಳು ತಮ್ಮ ಹೃದಯಗಹ್ವರದಲ್ಲಿ
ಪರಮಾತ್ಮನ ಕಾಣದರಸುವರೊ
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರೊ

ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿವರೊ ಗೋಪಾಲನೆ
ಮಗುಗಳ ಮಾಣಿಕ್ಯ ತಗುಲಿತು ಕರಕೆಂದು
ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೊ

ಧಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ಹಿಂದೆ ತಿರುಗುವರೊ
ಸೃಷ್ಟೀಶ ಪುರಂದರವಿಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೊ ರಂಗಯ್ಯ

ಇಂದಿನ ವಾರ ಶುಭವಾರ



ಇಂದಿನ ವಾರ ಶುಭವಾರ ಇಂದಿನ ದಿನ ಶುಭದಿನವು
ಇಂದಿನ ತಾರೆ ಶುಭತಾರೆ ಇಂದಿನ ಯೋಗ ಶುಭ ಯೋಗ
ಇಂದಿನ ಕರಣ ಶುಭಕರಣ ಇಂದಿನ ಲಗ್ನ ಶುಭಲಗ್ನ
ಇಂದು ಪುರಂದರವಿಠಲರಾಯನ ಪಾಡಿದ ದಿನವೆ ಶುಭದಿನವು

ಗುರುವಿನ ಗುಲಾಮನಾಗುವ ತನಕ

ಗುರುವಿನ ಗುಲಾಮನಾಗುವ ತನಕ
ದೊರಕದಣ್ಣ ಮುಕುತಿ



ಪರಿಪರಿಶಾಸ್ತ್ರವನೇಕವನೋದಿ
ವ್ಯರ್ಥವಾಯಿತು ಭಕುತಿ


ಆರು ಶಾಸ್ತ್ರವನೋದಿದರಿಲ್ಲ ಮೂ-
ರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ
ಧೀರನಾಗಿ ತಾ ಮೆರೆದರೆ ಇಲ್ಲ



ಕೊರಳೊಳು ಮಾಲೆಯ ಧರಿಸಿದರಿಲ್ಲ
ಬೆರಳೊಳು ಜಪಮಣಿ ಎಣಿಸಿದರಿಲ್ಲ
ಮರುಳನಂತೆ ಶರೀರಕೆ ಬೂದಿಯ
ಒರಸಿಕೊಂಡು ತಾ ತಿರುಗಿದರಿಲ್ಲ




ನಾರಿಯ ಭೋಗ ಅಳಿಸಿದರಿಲ್ಲ
ಶರೀರಕೆ ಸುಖವ ಬಿಡಿಸಿದರಿಲ್ಲ
ನಾರದ ವರದ ಶ್ರೀ ಪುರಂದರವಿಠಲನ
ಮರೆಯದೆ ಮನದೊಳು ಬೆರೆಯುವ ತನಕ

ಆಚಾರವಿಲ್ಲದ ನಾಲಿಗೆ ನಿನ್ನ



ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಯ ಬಿಡು ನಾಲಿಗೆ


ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ
ಚಾಚಿಕೊಂಡಿರುವಂತ ನಾಲಿಗೆ


ಪ್ರಾತಃಕಾಲದೊಳೆದ್ದು ನಾಲಿಗೆ ಸಿರಿ-
ಪತಿಯೆನ್ನಬಾರದೆ ನಾಲಿಗೆ
ಪತಿತ ಪಾವನ ನಮ್ಮ ರತಿಪತಿ ಜನಕನ
ಸತತವು ನುಡಿ ಕಂಡ್ಯ ನಾಲಿಗೆ


ಚಾಡಿ ಹೇಳಲಿಬೇಡ ನಾಲಿಗೆ ನಿನ್ನ
ಬೇಡಿಕೊಂಬುವೆನು ನಾಲಿಗೆ
ರೂಢಿಗೊಡಯ ಶ್ರೀರಾಮನ ನಾಮವ
ಪಾಡುತಲಿರು ಕಂಡ್ಯ ನಾಲಿಗೆ


ಹರಿಯ ಸ್ಮರಣೆ ಮಾಡು ನಾಲಿಗೆ ನರ-
ಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರವಿಟ್ಠಲರಾಯನ
ಚರಣಕಮಲವ ನೆನೆ ನಾಲಿಗೆ

ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ



ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಿನ್ನಂಥ ದೊರೆಯೊಬ್ಬ ಎನಗುಂಟು ನಿನಗಿಲ್ಲ
ನೀನೆ ಪರದೇಶಿ ನಾನೆ ಸ್ವದೇಶಿ
ನಿನ್ನ ಅರಸಿ ಲಕ್ಷ್ಮಿ ಎನ್ನ ತಾಯಿಯುಂಟು
ನಿನ್ನ ತಾಯಿ ತೋರೋ ಪುರಂದರವಿಠಲ

ನಿಂದಕರಿರಬೇಕಿರಬೇಕು




ನಿಂದಕರಿರಬೇಕಿರಬೇಕು
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಂಗೆ


ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿದ ಪುಣ್ಯವನೊಯ್ಯುವರಯ್ಯ


ದುಷ್ಟಜನರು ಈ ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲ ಕೀರ್ತಿಗಳು
ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು
ಇಷ್ಟೇ ವರವನು ಬೇಡುವೆನಯ್ಯ


ದುರುಳ ಜನಂಗಳು ಚಿರಕಾಲವಿರುವಂತೆ
ಕರವ ಮುಗಿದು ವರವ ಬೇಡುವೆನು
ಪರಿಪರಿ ತಮಸಿಗೆ ಗುರಿಯಹರಲ್ಲದೆ
ಪರಮ ದಯಾನಿಧೆ ಪುರಂದರವಿಠಲ

ಜಗದುದ್ಧಾರನ ಆಡಿಸಿದಳೆಶೋದೆ



ಜಗದುದ್ಧಾರನ ಆಡಿಸಿದಳೆಶೋದೆ



ಜಗದುದ್ಧಾರನ ಮಗನೆಂದು ತಿಳಿಯುತ
ಸುಗುಣಾಂತರಂಗನ ಆಡಿಸಿದಳೆಶೋದೆ



ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನಾಡಿಸಿದಳೆಶೋದೆ



ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದಳೆಶೋದೆ



ಪರಮಪುರುಷನ ಪರವಾಸುದೇವನ
ಪುರಂದರವಿಠಲನ ಆಡಿಸಿಳೆಶೋದೆ

ಎನಗೂ ಆಣೆ ರಂಗ ನಿನಗೂ ಆಣೆ



ಎನಗೂ ಆಣೆ ರಂಗ ನಿನಗೂ ಆಣೆ
ಎನಗು ನಿನಗೂ ಇಬ್ಬರಿಗೂ ಭಕ್ತರಾಣೆ


ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ


ತನುಮನಧನದಲ್ಲಿ ವಂಚಕನಾದರೆ ಎನಗೆ ಆಣೆ ರಂಗ
ಮನಸ್ಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ


ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ


ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ


ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು


ಉಂಬುಡುವುದಕ್ಕಿರುವ ಅರಸನೋಲಗಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು


ಹಂಬಲಿಸಿ ಹಾಳು ಹರಟೆ ಹೊಡೆವುದಕಿಂತ
ನಂಬಿ ಹರಿದಾಸರೊಳು ಪೊಂದಿ ಹಾಡುವುದೆ ಲೇಸು


ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿ ನೀರು ಕುಡಿದುಕೊಂಡಿಹುದೆ ಲೇಸು
ಬಿಡದೆ ಬಡಿದಾಡುವರ ನೆರೆಯಲಿಹುದಕ್ಕಿಂತ
ಅಡವಿಯೊಳಗಜ್ಞಾತವಾಸವೇ ಲೇಸು


ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಾದ ಹಾಳು ಗುಡಿಯೆ ಲೇಸು
ಬಿಸಜಾಕ್ಷ ಪುರಂದರವಿಟ್ಠಲನ ನೆನೆನೆನೆದು
ವಸುಧೆಯೊಳು ಚಿರಕಾಲವಿರುವುದೆ ಲೇಸು

ಕಲ್ಲುಸಕ್ಕರೆ ಕೊಳ್ಳಿರೋ


ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೋ


ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ


ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ


ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ


ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ

ಮಾನವ ಜನ್ಮ ದೊಡ್ಡದು - Manava janma doddadu



ಮಾನವ ಜನ್ಮ ದೊಡ್ಡದು ಇದ
ಹಾನಿ ಮಾಡಲಿಬೇಡಿ ಹುಚ್ಹಪ್ಪಗಳಿರಾ


ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಮೃತ
ಉಣ್ಣದೆ ಉಪವಾಸ ಇರುವರೆ ಖೋಡಿ


ಕಾಲನ ದೂತರು ಕಾಲ್ ಪಿಡಿದೆಳೆವಾಗ
ತಾಳು ತಾಳೆಂದರೆ ತಾಳುವರೆ
ದಾಳಿ ಬಾರದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲುಬೇಡಿ


ಏನು ಕಾರಣ ಯದುಪತಿಯನು ಮರೆತಿರಿ
ಧನ ಧಾನ್ಯ ಸತಿಸುತರು ಕಾಯುವರೆ
ಇನ್ನಾದರು ಏಕೋಭಾವದಿ ಭಜಿಸಿರೊ
ಚೆನ್ನ ಶ್ರೀ ಪುರಂದರವಿಟ್ಠಲರಾಯನ

ಶ್ರೀ ಪುರಂದರ ದಾಸರು - Shri Purandara dasaru


ಹರಿದಾಸರೇಣ್ಯರೆಂದು ಹೆಸರುವಾಸಿಯಾಗಿರುವ ಪುರಂದರದಾಸರ ಪೂರ್ವ ನಾಮ ಶ್ರೀನಿವಾಸನಾಯಕ. ಈತ ನವಕೋಟಿ ನಾರಾಯಣನೆನ್ನಿಸಿ ಅತ್ಯಂತ ಶ್ರೀಮಂತನಾಗಿದ್ದನು. ಈತನ ಹೆಂಡತಿಯ ಹೆಸರು ಸರಸ್ವತೀಬಾಯಿ.

ಶ್ರೀನಿವಾಸನಾಯಕರು ಆಗರ್ಭ ಶ್ರೀಮಂತರಾಗಿದ್ದರೂ ತುಂಬ ಜಿಪುಣರಾಗಿದ್ದರು. ಆತನ ಪತ್ನಿ ಸರಸ್ವತಿಬಾಯಿಯಾದರೋ ಪರಮ ದೈವಭಕ್ತಳು. ಶ್ರೀನಿವಾಸನಾಯಕರಿಗೆ ಜ್ನಾನೋದಯವನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಭಗವಂತನು ಬಡಬ್ರಾಹ್ಮಣನ ವೇಷವನ್ನು ಧರಿಸಿ ಒಬ್ಬ ಹುಡುಗನೊಂದಿಗೆ ಕೂಡಿ, ತನ್ನ ಮಗನಿಗೆ ಬ್ರಹ್ಮೋಪದೇಶವನ್ನು ಮಾಡಿಸುವ ಸಲುವಾಗಿ ಧನಸಹಾಯ ಮಾಡಬೇಕೆಂದು ಶ್ರೀನಿವಾಸನಾಯಕರಲ್ಲಿ ಬಂದು ಯಾಚಿಸಿದನು.

ಶ್ರೀನಿವಾಸನಾಯಕರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ, ಆ ಬ್ರಾಹ್ಮಣನನ್ನು ಹಲವಾರು ಬಾರಿ ಅಲೆದಾಡಿಸಿ ಕಡೆಗೆ ಒಂದು ಸವಕಲು ನಾಣ್ಯವನ್ನು ಕೊಟ್ಟರು. ಖಿನ್ನನಾದ ಬಡ ಬ್ರಾಹ್ಮಣನು ಸರಸ್ವತಿಬಾಯಿಯಲ್ಲಿಗೆ ಬಂದು ತನ್ನ ಮನೋಭಿಪ್ರಾಯವನ್ನು ತಿಳಿಸಿದನು. ಆಕೆಯ ಮನಸ್ಸು ಕರಗಿತು. ಮೊದಮೊದಲು ದಿಕ್ಕು ತೋಚದಂತಾಯಿತು. ಕಡೆಗೆ ತನ್ನ ತವರಿನವರು ತನಗೆ ಕೊಟ್ಟಿದ್ದ ಮುತ್ತಿನ ಮೂಗುತಿಯನ್ನು ಆ ಬ್ರಾಹ್ಮಣನಿಗೆ ಕೊಟ್ಟು ಕಳುಹಿಸಿದಳು. 

ವೇಶಧಾರಿಯಾದ ಆ ಬ್ರಾಹ್ಮಣನು ಆ ಒಡವೆಯನ್ನು ಅಡವಿಟ್ಟು ಹಣವನ್ನು ಪಡೆಯಲೆಂದು ಶ್ರೀನಿವಾಸರಲ್ಲಿಗೇ ಬಂದನು. ಕುಶಾಗ್ರಮತಿಯಾದ ಶ್ರೀನಿವಾಸನಾಯಕರು, ಆ ಒಡವೆ ಯಾರದಿರಬಹುದೆಂದು ಊಹಿಸಿ, ಒಡನೆಯೇ ಮನೆಗೆ ಬಂದು, ನಿಜವೃತ್ತಾಂತವನ್ನು ತಿಳಿದು, ಹೆಂಡತಿಯನ್ನು ದಂಡಿಸಿದರು.

ಆಕೆ ಅಸಹಾಯಕಳಾಗಿ ಪರಮಾತ್ಮನನ್ನು ಪ್ರಾರ್ಥಿಸಿದಳು. ಗಂಡನ ಆಗ್ರಹವನ್ನು ಎದುರಿಸಲಾಗದೆ, ತನ್ನ ಪ್ರಾಣವನ್ನೇ ತ್ಯಾಗಮಾಡಬೇಕೆಂದು ವಿಷವನ್ನು ಕುಡಿಯಲು ಬಟ್ಟಲನ್ನು ಮೇಲಕ್ಕೆ ಎತ್ತಿದಾಗ ಅದರಲ್ಲಿ ಆಕೆಯ ಮೂಗುತಿ ಬಿದ್ದಿದ್ದು ಗೋಚರಿಸಿತು. ಈ ಸೋಜಿಗವನ್ನು ಮನಗಂಡ ಶ್ರೀನಿವಾಸನಾಯಕರಿಗೆ ತಮ್ಮ ಅಜ್ಞಾನ ಸರಿದು, ಬಂದಾತ ಭಗವಂತನಿರಬೇಕೆಂದು ಧೃಡವಾಯಿತು. ಆ ಕ್ಷಣವೇ ತಮ್ಮ ಆಸ್ತಿ ಪಾಸ್ತಿಗಳೆನ್ನೆಲ್ಲ ಶ್ರಿಷ್ಣಾರ್ಪಣವೆಂದು ದೇವರಿಗೆ ಸಲ್ಲಿಸಿ ವಿರಕ್ತರಾದರು.

 "ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು" ಎಂದು ಹಿಗ್ಗಿ ಹಾಡುತ್ತಾ ತಮಗೆ ಜ್ಞಾನೋದಯವನ್ನು ಉಂಟು ಮಾಡಿದ ತಮ್ಮ ಹೆಂಡತಿಯನ್ನು ಮುಕ್ತ ಕಂಠದಿಂದ ಕೊಂಡಾಡಿದರು. ಅನಂತರ ಶ್ರೀವ್ಯಾಸರಾಯರಲ್ಲಿಗೆ ಹೋಗಿ "ಪುರಂದರ ವಿಠಲ" ಎಂಬ ಅಂಕಿತವನ್ನು ಪಡೆದು ತಮ್ಮ ಕೀರ್ತನ ಕೈಂಕರ್ಯವನ್ನು ಅತ್ಯಂತ ಉಜ್ವಲವಾಗಿ ನೆರವೇರಿದರು.

ಶ್ರೀಪುರಂದರದಾಸರು ಸಾಧಿಸಿದ ಮಹಾತ್ಕಾರವನ್ನು ಮೆಚ್ಹಿಕೊಂಡು ಶ್ರೀವ್ಯಾಸರಾಯರು ಅವರನ್ನು "ದಾಸರೆಂದರೆ ಪುರಂದರದಾಸರಯ್ಯ" ಎಂದು ಪ್ರಶಂಸಿಸಿದಷ್ಟೇ ಅಲ್ಲದೆ ಅವರ ರಚನೆಗಳನ್ನು "ಪುರಂದರೋಪನಿಷತ್ತು" ಎಂದು ಗೌರವಿಸಿರರು.

ಶ್ರೀ ಪುರಂದರದಾಸರು ೪,೭೫,೦೦೦ ಕೃತಿಗಳನ್ನು ರಚಿಸಿದರೆಂದು ತಿಳಿದು ಬರುತ್ತದೆ. ಈಗ ಉಪಲಬ್ಧವಾಗಿರುವ ಅವರ ಕೀರ್ತನೆಗಳ ಸಮುದಾಯವನ್ನು ಸಮೀಕ್ಷಿಸಿದರೆ ಅವರ ಪ್ರಾಸಾದಿಕವಾಣಿಯ ವೈಭವವು ಸ್ವವಿವಿದಿತವಾಗುತ್ತದೆ. ಅವರ ಕೃತಿಗಳಲ್ಲಿ ಸಾಹಿತ್ಯ, ಸಂಗೀತ ಮತ್ತು ಸ್ವಧರ್ಮ ನಿಷ್ಠೆಗಳ ತ್ರಿವೇಣಿ ಸಂಗಮವನ್ನು ಕಾಣಬಹುದು. ಅವರನ್ನು 'ಕರ್ಣಾಟಕ ಸಂಗೀತ ಪಿತಾಮಹ' ಎಂದು ಎಲ್ಲರೂ ಮನ್ನಿಸುವುದುಂಟು. ಸಮಗ್ರ ಹರಿದಾಸ ಸಾಹಿತ್ಯ ಪ್ರಪಂಚದ ಪ್ರತಿನಿಧಿಯಂತಿರುವ ಪುರಂದರದಾಸರನ್ನು "ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ" ಎಂದು ಹೊಗಳುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪುರಂದರದಾಸರು ನಾರದರೆಂದು ಸುಪ್ರಸಿದ್ಧವಾಗಿರುವುದರಿಂದ ಅವರು ಭಕ್ತಿ ಸಂಪನ್ನರು, ಗಾನ ಲೋಲರು.